ಮಂಗಳೂರಿಗೆ ಆಗಮಿಸಿದ ಎರಡನೇ ವಿಮಾನ

mangalore Airport
Published on

ಮಂಗಳೂರು: ವಂದೇ ಭಾರತ್ ಮಿಷನ್ ಅಡಿಯಲ್ಲಿ ಕರಾವಳಿಗೆ ಎರಡನೇ ವಿಮಾನ(ಐಎಕ್ಸ್ 414) ದುಬೈನಿಂದ 178 ಪ್ರಯಾಣಿಕರೊಂದಿಗೆ ಸೋಮವಾರ ಸಂಜೆ ಆಗಮಿಸಿತು.

ಆಗಮಿಸಿದವರಲ್ಲಿ 25 ಮಂದಿ ಬೆಂಗಳೂರಿನ ಪ್ರಯಾಣಿಕರಿದ್ದು, ಅವರನ್ನು ಅಲ್ಲಿಂದಲೇ ನೇರವಾಗಿ ಬಸ್ ಮೂಲಕ ಕಳುಹಿಸಲಾಯಿತು. ಅವರಿಗೆ ಇಲ್ಲಿ ಕೋವಿಡ್ ಪರೀಕ್ಷೆ ಮಾಡಲಾಗಿಲ್ಲ, ಬೆಂಗಳೂರಿಗೆ ತಲುಪಿ ಅವರು ಪರೀಕ್ಷೆಗೆ ಒಳಗಾಗಲಿದ್ದಾರೆ. ಅದೇ ರೀತಿ ಕೊಡಗು ಜಿಲ್ಲೆಯ 8 ಮಂದಿ, ಉಡುಪಿಯ 65 ಮಂದಿ ಪ್ರಯಾಣಿಕರೂ ಇದ್ದು, ಅವರನ್ನೂ ಅವರ ಜಿಲ್ಲೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ದ.ಕ. ಜಿಲ್ಲೆಯ 80 ಪ್ರಯಾಣಿಕರಿದ್ದರು.

ಇಳಿದ ನಂತರ ವಿಮಾನ ನಿಲ್ದಾಣದಲ್ಲಿ ಹಣ ವರ್ಗಾವಣೆ, ಸಿಮ್ ವಿತರಣೆ, ಆರೋಗ್ಯ ಕಿಟ್ ವಿತರಣೆ, ಉಪಹಾರ ವ್ಯವಸ್ಥೆ ಮಾಡಲಾಯಿತು. ನಂತರ ಆರೋಗ್ಯ ಇಲಾಖೆಯ ತಪಾಸಣಾ ತಂಡದಿಂದ ಪ್ರತೀ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಲಾಯಿತು. ಪ್ರಯಾಣಿಕರಿಗೆ ಸ್ಟಾಂಪಿಂಗ್ ಮಾಡಿ, ಇಮಿಗ್ರೇಷನ್ ಪ್ರಕ್ರಿಯೆ ನಡೆಸಲಾಯಿತು. ಆ ಬಳಿಕ ಪ್ರಯಾಣಿಕರಿಗೆ ಊಟದ ವ್ಯವಸ್ಥೆಯನ್ನೂ ಏರ್ಪಡಿಸಲಾಗಿತ್ತು.

ಪ್ರಯಾಣಿಕರನ್ನು ನಿಗದಿತ ಕ್ವಾರೆಂಟೈನ್ ಕೇಂದ್ರಗಳಿಗೆ ಜಿಲ್ಲಾಡಳಿತ ಬಸ್ಸಿನಲ್ಲಿ ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಿತ್ತು. ಸೋಮವಾರ ಪ್ರಾಥಮಿಕ ಪರೀಕ್ಷೆಯಷ್ಟೇ ನಡೆದಿದ್ದು ಆಗಮಿಸಿದವರ ಗಂಟಲ ದ್ರವ ಪರೀಕ್ಷೆ ಮೇ 19ರಂದು ನಡೆಯಲಿದೆ.

ವಿಮಾನ ಆಗಮನ ಸಂದರ್ಭ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಪ್ರೊಬೆಷನರಿ ಐಎಎಸ್ ಅಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ, ವಿಮಾನ ನಿಲ್ದಾಣ ನಿರ್ದೇಶಕ ವಿ.ವಿ.ರಾವ್, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಇದ್ದರು.

ಈ ಬಾರಿ ಅವ್ಯವಸ್ಥೆ ಇಲ್ಲ

ವಿಮಾನದಲ್ಲಿ 35 ಗರ್ಭಿಣಿಯರಿದ್ದು, ಅವರಿಗಾಗಿ ಆರೋಗ್ಯ ಇಲಾಖೆಯಿಂದ ಪ್ರತ್ಯೇಕ ತಂಡ ರಚಿಸಲಾಗಿತ್ತು. ಪ್ರಯಾಣಿಕರ ವಿವರಗಳನ್ನು ಕೆಲದಿನ ಮೊದಲೇ ಪಡೆದ ಜಿಲ್ಲಾಡಳಿತ ಆನ್‌ಲೈನ್ ಮೂಲಕವೇ ಹೋಟೆಲ್ ಬುಕ್ಕಿಂಗ್‌ಗೆ ಅವಕಾಶ ನೀಡಿದ್ದರಿಂದ ವಿಮಾನ ನಿಲ್ದಾಣದಲ್ಲಿ ವಿಳಂಬ ತುಸು ತಗ್ಗಿದೆ. ಅಗತ್ಯವಿರುವ ಕೌಂಟರ್‌ಗಳ ಸಂಖ್ಯೆಯನ್ನೂ ಹೆಚ್ಚಿಸಿದ್ದು, ಅಶಕ್ತ ಪ್ರಯಾಣಿಕರಿಗೆ ನೆರವಾಗಲು ಸಹಾಯಕರ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಮೊದಲ ವಿಮಾನ ಮೇ 12ರಂದು ದುಬೈನಿಂದ ಆಗಮಿಸಿದ್ದು, ಅನೇಕ ಅವ್ಯವಸ್ಥೆಗಳ ಬಗ್ಗೆ ಪ್ರಯಾಣಿಕರು ದೂರಿದ್ದರು, ಅಂತಹ ಅಂಶಗಳನ್ನು ಈ ಬಾರಿ ಜಿಲ್ಲಾಡಳಿತ ಸರಿಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net