

ಬೆಂಗಳೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಉಡಾನ್ ಯೋಜನೆಯಡಿ ಟರ್ಬೆ ಮೆಘಾ ಏರ್ವೇಸ್ನಿಂದ ಬೆಂಗಳೂರು ಮತ್ತು ಬೀದರ್ ನಡುವೆ ವೈಮಾನಿಕ ಸೇವೆ ಶುಕ್ರವಾರ ಆರಂಭವಾಗಲಿದೆ. ಸಿಎಂ ಯಡಿಯೂರಪ್ಪ ಬೆಳಗ್ಗೆ 9.50ಕ್ಕೆ ಬೆಂಗಳೂರಿನಿಂದ ಟ್ರೂಜೆಟ್ ವಿಮಾನದಲ್ಲಿ ಹೊರಟು 11.30ಕ್ಕೆ ಬೀದರ್ ಏರ್ಪೋರ್ಟ್ಗೆ ಬಂದಿಳಿ ಯಲಿದ್ದಾರೆ. ಬಳಿಕ ಇಲ್ಲಿಂದ ಆರಂಭವಾಗುತ್ತಿರುವ ನಾಗರಿಕ ವಿಮಾನ ಸೇವೆಗೆ ಚಾಲನೆ ನೀಡಲಿದ್ದಾರೆ.
ಪ್ರತಿನಿತ್ಯ ಬೆಳಗ್ಗೆ 11.25ಕ್ಕೆ ಬೆಂಗಳೂರಿನಿಂದ ಹೊರಡ ಲಿರುವ ವಿಮಾನ ಮಧ್ಯಾಹ್ನ 1.05ಕ್ಕೆ ಬೀದರ್ ತಲುಪಲಿದೆ. ಮ.1.35ಕ್ಕೆ ಬೀದರ್ ನಿಂದ ಹೊರಟು 3.15ಕ್ಕೆ ಬೆಂಗಳೂರಿಗೆ ಮರಳಲಿದೆ.
ಟ್ರೂಜೆಟ್ ಸಂಸ್ಥೆ: ‘ಉಡೇ ದೇಶ್ ಕಾ ಆಮ್ ನಾಗರಿಕ್’ ಘೊಷವಾಕ್ಯದೊಂದಿಗೆ ಉಡಾನ್ ಹೆಸರಿನ ಮೂಲಕ ದೇಶದ ಪ್ರಾದೇಶಿಕ ನಗರಗಳನ್ನು ಸಂರ್ಪಸುವ ಪ್ರಧಾನಿ ನರೇಂದ್ರ ಮೋದಿ ಕನಸನ್ನು ನನಸಾಗಿಸುತ್ತಿರುವ ಟ್ರೂಜೆಟ್ ಉಡಾನ್-1, 2 ಮತ್ತು 3ರ ಅಡಿಯಲ್ಲಿ ತನಗೆ ವಹಿಸಿರುವ ಎಲ್ಲ ಮಾರ್ಗಗಳಲ್ಲೂ ವೈಮಾನಿಕ ಸೇವೆ ಒದಗಿಸುತ್ತಿರುವ ಏಕಮೇವ ಸಂಸ್ಥೆಯಾಗಿ ಹೊರಹೊಮ್ಮಿದೆ. ತನ್ನ ಜಾಲದ 24ನೇ ಕೇಂದ್ರವಾಗಿ ಬೀದರ್ಗೆ ಟ್ರೂಜೆಟ್ ವೈಮಾನಿಕ ಸೇವೆಯನ್ನು ಆರಂಭಿಸುತ್ತಿದೆ. 2015ರ ಜು.12ರಂದು ಕಾರ್ಯಾಚರಣೆ ಆರಂಭಿಸಿದ ಸಂಸ್ಥೆಯು
ಪ್ರಮುಖ ಮತ್ತು ಸಣ್ಣ ನಗರಗಳ ನಡುವಿನ ಸಂಪರ್ಕ ಸಾಧಿಸುವ ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ದೇಶದ ಜತೆಗೂಡಿ ಕಾರ್ಯನಿರ್ವಹಿಸುತ್ತಿದೆ ಎಂದು ಸಂಸ್ಥೆ ನಿರ್ದೇಶಕ ಕೆ.ಪಿ.ಪ್ರದೀಪ್ ತಿಳಿಸಿದ್ದಾರೆ.
ಬಸ್ನಲ್ಲಿ ಬೆಂಗಳೂರಿಂದ ಬೀದರ್ಗೆ 12 ಗಂಟೆ ಪ್ರಯಾಣ ಮಾಡಬೇಕಿತ್ತು. ತುರ್ತಾಗಿ ಬೆಂಗಳೂರಿಗೆ ಬರಲು ಹೈದರಾಬಾದ್ಗೆ ತೆರಳಿ ಅಲ್ಲಿಂದ ವಿಮಾನದಲ್ಲಿ ಬರಬೇಕಿತ್ತು. ಆದರೀಗ ಈ ವೈಮಾನಿಕ ಸೇವೆಯಿಂದ 1 ಗಂಟೆ 40 ನಿಮಿಷದಲ್ಲಿ ಬೆಂಗಳೂರಿಂದ ಬೀದರ್ಗೆ ತಲುಪಬಹುದೆಂದು ಸಂಸ್ಥೆ ಸಿಇಒ ಎಲ್.ಎಸ್.ಎನ್.ಮೂರ್ತಿ ವಿವರಿಸಿದ್ದಾರೆ.
ಟಿಕೆಟ್ ಬುಕಿಂಗ್
www.trujet.com ವೆಬ್ಸೈಟ್ನಲ್ಲಿ ಕಾಲ್ಸೆಂಟರ್ ಸಂಖ್ಯೆ
+914040904090, ಪ್ರವಾಸಿ ಏಜೆಂಟ್ಗಳ ಮೂಲಕ ಟ್ರೂಜೆಟ್ ಟಿಕೆಟ್ಗಳನ್ನು ಬುಕ್ ಮಾಡಬಹುದು. ಒಂದು ವಾರ ಮುಂಚಿತವಾಗಿ ಟಿಕೆಟ್ ಬುಕ್ ಮಾಡಿದವರಿಗೆ ಎಲ್ಲ ಕರ ಸೇರಿ 1299-1499 ರೂ. ದರವಿದೆ. ಇದು 14 ತಾಸು ಸಂಚಾರದ ಬಸ್ಸಿಗೆ ಕೊಡುವ ದರಕ್ಕೆ ಸಮ ಎಂಬುದು ಗಮನಾರ್ಹ.
24 ಕೇಂದ್ರಗಳಲ್ಲಿ ಸೇವೆ
ಹೈದರಾಬಾದ್ ಮೂಲದ ಟರ್ಬೆ ಮೆಘಾ ಏರ್ವೇಸ್ ಪ್ರೈ.ಲಿ. ತನ್ನ ಜಾಲಕ್ಕೆ 24 ಕೇಂದ್ರಗಳನ್ನು ಸೇರ್ಪಡೆಗೊಳಿಸಿಕೊಂಡಿದ್ದು, ಹೈದರಾಬಾದ್, ಅಹ್ಮದಾಬಾದ್ ಮತ್ತು ಚೆನ್ನೈನಿಂದ ಔರಂಗಾಬಾದ್, ಬೆಳಗಾವಿ, ಬೆಂಗಳೂರು, ಬೀದರ್, ಕಡಪ, ಗೋವಾ, ಇಂದೋರ್, ಜೈಸಲ್ಮೆರ್, ಜಲಗಾವ್, ಖಾಂಡ್ಲಾ, ಕೊಲ್ಹಾಪುರ, ಮುಂಬೈ, ಮೈಸೂರು, ನಾಂದೇಡ್, ನಾಸಿಕ್, ಪೋರ್ಬಂದರ್, ರಾಜಮಂಡ್ರಿ, ಸೇಲಂ, ತಿರುಪತಿ, ವಿದ್ಯಾನಗರ ಮತ್ತು ವಿಜಯವಾಡಗಳಲ್ಲಿ ವೈಮಾನಿಕ ಸಂಪರ್ಕ ಜಾಲ ಹೊಂದಿದೆ.