ಕಾಂಗ್ರೆಸ್ ಅಧಿಕಾರದಲ್ಲಿ ದುಷ್ಟ ಶಕ್ತಿಗಳ ಹಾರಾಟ

dvg-Mahesh-Tenginakai-23-1.jpg
Published on

ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ಎಲ್ಲ ದುಷ್ಟ ಶಕ್ತಿಗಳು ಹಾರಾಡುತ್ತಿವೆ. ಹಾಗಾಗಿ ಎಲ್ಲೆಂದರಲ್ಲಿ ಲವ್ ಜಿಹಾದ್ ಪ್ರಕರಣಗಳು ನಡೆಯುತ್ತಿವೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಾರವಾಡ ಜಿಲ್ಲೆಯಲ್ಲಿ ನಡೆದ ಲವ್ ಜಿಹಾದ್ ಪ್ರಕರಣ ಖಂಡನೀಯ. ಇಂಥ ಪ್ರಕರಣಗಳಿಗೆ ಸರ್ಕಾರವೇ ಉತ್ತರ ನೀಡಬೇಕು ಎಂದರು.
ಕಾಂಗ್ರೆಸ್ ಸರ್ಕಾರದ ಆಡಳಿತ ಸಂಪೂರ್ಣ ಕುಸಿದು ಹೋಗಿದೆ. ಆಡಳಿತ ಯಂತ್ರ ಸರಿಯಾಗಿ ಇಲ್ಲದ್ದರಿಂದ ಇಂತಹ ಪ್ರಕರಣಗಳು ಸರ್ವೇ ಸಾಮಾನ್ಯವಾಗುತ್ತವೆ. ರಾಜ್ಯ ಸರ್ಕಾರದ ಆಡಳಿತ ವ್ಯವಸ್ಥೆಯಲ್ಲಿ ಸಂಪೂರ್ಣ ಹಿಡಿತ ಕಳೆದುಕೊಂಡಿದೆ ಎಂದು ದೂರಿದರು.
ರಾಜ್ಯ ಸರ್ಕಾರ ಸಂಪೂರ್ಣ ಹಗರಣಗಳಲ್ಲಿ ಮುಳುಗಿಹೋಗಿದೆ. ಮುಡಾ ಹಾಗರಣದಲ್ಲಿ ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಈ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸಮಜಾಯಿಸಿ ಹೇಳಿಕೆ ನೀಡಿದ್ದಾರೆ. ಮುಡಾ ಹಗರಣದಲ್ಲಿ ದಲಿತರ ಜಾಗವನ್ನ ಅಕ್ರಮ ಮಾಡಿರುವ ಕುರಿತ ಎಲ್ಲ ದಾಖಲೆಗಳಿವೆ. ಈ ಬಗ್ಗೆ ಸದನದಲ್ಲಿ ಚರ್ಚೆ ಮಾಡಲು ಅವಕಾಶ ಮಾಡಿಕೊಡಲಿಲ್ಲ. ಯಾವುದೇ ತಪ್ಪು ಇಲ್ಲದಿದ್ದಲ್ಲಿ ಸಿಎಂ ಅವರು ಚರ್ಚೆಗೆ ಯಾಕೆ ಅವಕಾಶ ಮಾಡಿಕೊಡಲಿಲ್ಲ? ಚರ್ಚೆಗೆ ಅವಕಾಶ ಮಾಡಿದ್ದಲ್ಲಿ ಎಲ್ಲ ಸತ್ಯಾಸತ್ಯತೆ ಗೊತ್ತಾಗುತ್ತಿತ್ತು. ಮೇಲ್ನೋಟದಲ್ಲಿ ಸಿಎಂ ಅವರ ಪತ್ನಿ ಹೆಸರಲ್ಲಿ ನಡೆದಿರುವ ಅಕ್ರಮ ಸ್ಪಷ್ಟವಾಗಿದೆ. ಸರ್ಕಾರ ಎರಡು ಹಗರಣಗಳ ವಿಚಾರದಲ್ಲಿ ಬೆಲೆ ತೆರಬೇಕಾಗುತ್ತದೆ. ಈ ಹಗರಣಗಳು ಬೆಳಕಿಗೆ ಬರುವಂತೆ ಸರ್ಕಾರ ವಿಷಯಾಂತರ ಮಾಡುತ್ತಿದೆ. ವಾಲ್ಮೀಕಿ ಹಗರಣದಲ್ಲಿ ಸರ್ಕಾರದ ಶಾಮೀಲು ಸ್ಪಷ್ಟವಾಗಿದೆ. ಈ ಹಗರಣ ತಮ್ಮ ಬುಡಕ್ಕೆ ಬರುತ್ತದೆ ಎನ್ನುವುದು ಸಿಎಂಗೆ ಮನವರಿಕೆಯಾಗಿದೆ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದು ಟೆಂಗಿನಕಾಯಿ ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net