

ಮಂಗಳೂರು: ಕರೊನಾ ಲಾಕ್‌ಡೌನ್ ಬಳಿಕ ದೇಶೀಯ ವಿಮಾನ ಹಾರಾಟ ಮೊದಲ ದಿನ ಬೆಂಗಳೂರು-ಮಂಗಳೂರು ಮಧ್ಯೆ ಮಾತ್ರವೇ ವಿಮಾನಗಳು ಸಂಚರಿಸಿವೆ.
ತಾಂತ್ರಿಕ ಕಾರಣ ಹಾಗೂ ಪ್ರಯಾಣಿಕರ ಕೊರತೆಯಿಂದಾಗಿ ಚೆನ್ನೈ-ಮಂಗಳೂರು ಹಾಗೂ ಮುಂಬೈ-ಮಂಗಳೂರು ವಿಮಾನಗಳು ಆಗಮಿಸಲಿಲ್ಲ. ನಿಗದಿಯಾಗಿದ್ದ ಆರು ವಿಮಾನಗಳ ಪೈಕಿ ನಾಲ್ಕು ವಿಮಾನ ಹಾರಾಟ ರದ್ದಾಗಿದೆ. ಮುಂಬೈ ಹಾಗೂ ಚೆನ್ನೈ ಏರ್‌ಪೋರ್ಟ್ ಇನ್ನೂ ದೇಶೀಯ ವಿಮಾನ ಹಾರಾಟಕ್ಕೆ ಸಜ್ಜುಗೊಂಡಿಲ್ಲ, ಅಲ್ಲದೆ ಈ ಭಾಗಕ್ಕೆ ಬರುವ ಪ್ರಯಾಣಿಕರೂ ಕ್ವಾರಂಟೈನ್ ಭೀತಿಯಿಂದ ಬರುತ್ತಿಲ್ಲ ಎನ್ನಲಾಗಿದೆ.
ಮಂಗಳೂರಿಗೆ ಮೊದಲ ವಿಮಾನವಾಗಿ ಏರ್ ಇಂಡಿಗೊ ಬೆಂಗಳೂರಿನಿಂದ ಸೋಮವಾರ ರಾತ್ರಿ 6.45ಕ್ಕೆ 47 ಪ್ರಯಾಣಿಕರೊಂದಿಗೆ ಇಳಿಯಿತು. 7.30ಕ್ಕೆ ಇದೇ ವಿಮಾನ ಮರಳಿ ಬೆಂಗಳೂರಿಗೆ 35 ಮಂದಿ ಪ್ರಯಾಣಿಕರೊಂದಿಗೆ ತೆರಳಿತು. ಆಗಮಿಸಿದ 47 ಮಂದಿಯಲ್ಲಿ 13 ಮಂದಿ ‘ಕರೊನಾ ರಿಸ್ಕ್’ ಪ್ರದೇಶಗಳಾದ ದೆಹಲಿ, ಮದುರೈ, ಪುಣೆಯಿಂದಲೂ ಬೆಂಗಳೂರು ಮೂಲಕ ಬಂದಿದ್ದು ಅವರನ್ನು ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ವಿಮಾನ ಸಂಸ್ಥೆ ವತಿಯಿಂದ ಪ್ರತ್ಯೇಕಿಸಲಾಯಿತು. ಎಲ್ಲರ ತಾಪಮಾನ ಪರೀಕ್ಷೆ ನಡೆಸಲಾಗಿದ್ದು 13 ಮಂದಿಯನ್ನು ಕಡ್ಡಾಯ 7 ಸಾಂಸ್ಥಿಕ ಹಾಗೂ 7 ದಿನ ಗೃಹ ನಿಗಾವಣೆಗಾಗಿ ಜಿಲ್ಲಾಡಳಿತಕ್ಕೆ ಒಪ್ಪಿಸಲಾಗಿದೆ. ಲೋ ರಿಸ್ಕ್ ಪ್ರದೇಶದಿಂದ ಬಂದವರನ್ನು ಮನೆ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಲಾಗಿದೆ.
ರಾತ್ರಿ 9.15ಕ್ಕೆ ಸ್ಪೈಸ್ ಜೆಟ್ ವಿಮಾನವೂ ಬೆಂಗಳೂರಿನಿಂದ ಆಗಮಿಸಿದ್ದು ಬಳಿಕ 9.30ಕ್ಕೆ ತೆರಳಿದೆ. ಸದ್ಯಕ್ಕೆ ಚೆನ್ನೈ, ಮುಂಬೈ ಮಧ್ಯೆ ವಿಮಾನ ಹಾರಾಟ ನಡೆಯುವುದು ಕಷ್ಟ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ನಮೂನೆ ಭರ್ತಿ ಯಾಕಾಗಿ?
ವಿಮಾನಗಳಲ್ಲಿ ಬರುವ ಪ್ರಯಾಣಿಕರಿಂದ ಜಿಲ್ಲಾಡಳಿತ ಒಂದು ನಮೂನೆಯನ್ನು ಭರ್ತಿ ಮಾಡಿಕೊಡಲು ಹೇಳುತ್ತಿದೆ. ಅದರಲ್ಲಿ ಅವರ ವಿವರ ಬರೆಯಬೇಕಿದೆ. ಆದರೆ ವಿಮಾನ ಹಾರಾಟ ಸಂದರ್ಭದಲ್ಲಿ ಸಂಪರ್ಕ ಇರಬಾರದು ಎಂದು ಟಿಕೆಟ್ ತಪಾಸಣೆ ಗಾಜಿನ ಕಿಟಿಕಿ ಒಳಗಿಂದಲೇ ಆಗುತ್ತದೆ, ಬ್ಯಾಗೇಜ್ ಟ್ಯಾಗ್ ಹಾಕುವುದು, ಬೋರ್ಡಿಂಗ್ ಪಾಸ್ ಸ್ಕಾೃನ್ ಮೊದಲಾದವುಗಳನ್ನು ಪ್ರಯಾಣಿಕರೇ ಮಾಡುತ್ತಾರೆ. ಆದರೆ ಸಂಪರ್ಕ ರಹಿತ ವ್ಯವಸ್ಥೆ ಇರುವಾಗ ಮತ್ತೆ ಪ್ರಯಾಣಿಕರಿಂದ ಬರೆಸುವುದು ಯಾಕಾಗಿ ಎನ್ನುವುದು ಕೆಲವು ಅಧಿಕಾರಿಗಳ ಪ್ರಶ್ನೆ. ಪ್ರಯಾಣಿಕರಲ್ಲಿ ಪೆನ್ ಇರುವುದಿಲ್ಲ, ಬೇರೆಯವರಲ್ಲಿ ಕೇಳುತ್ತಾರೆ. ಇದರಿಂದ ಸೋಂಕು ಹರಡುವ ಭೀತಿಯೂ ಇದೆ. ಜಿಲ್ಲಾಡಳಿತಕ್ಕೆ ಪ್ರಯಾಣಿಕರ ಮಾಹಿತಿ ಅಗತ್ಯವಿದ್ದರೆ ವಿಮಾನ ಸಂಸ್ಥೆಗಳಿಂದಲೇ ಪಡೆದುಕೊಳ್ಳಬಹುದು.