ಮಂಗಳೂರಿನಲ್ಲಿ ಇಳಿಯದೆ ಬೆಂಗಳೂರಿಗೆ ತೆರಳಿದ ವಿಮಾನ

AIR INDIA
Published on

ಮಂಗಳೂರು: ಅಬುಧಾಬಿ ಮತು ದುಬೈಯಿಂದ ಸೋಮವಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಎರಡು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳನ್ನು ಹವಾಮಾನ ವೈಪರೀತ್ಯ ಕಾರಣ ಬೆಂಗಳೂರಿಗೆ ಕಳುಹಿಸಲಾಯಿತು.

ದುಬೈ ಹಾಗೂ ಅಬುಧಾಬಿಯಿಂದ ಭಾನುವಾರ ರಾತ್ರಿ 11.30ಕ್ಕೆ ಹೊರಟ ಏರ್ ಇಂಡಿಯಾ ಎಕ್ಸ್‌ಪ್ರೆಸ್ (ಐಎಕ್ಸ್ 0384) ಮತ್ತು (ಐಎಕ್ಸ್0816) ವಿಮಾನಗಳು ಸೋಮವಾರ ಮುಂಜಾನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ ವಿಮಾನ ನಿಲ್ದಾಣ ಪರಿಸರದಲ್ಲಿ ದಟ್ಟವಾದ ಮಂಜು ಆವರಿಸಿದ್ದ ಕಾರಣ ರನ್‌ವೇಯಲ್ಲಿ ವಿಮಾನ ಇಳಿಯಲು ಸಾಧ್ಯವಾಗಿಲ್ಲ. ಬಳಿಕ ಎರಡು ವಿಮಾನಗಳು ಬೆಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿವೆ. ಈ ಪೈಕಿ ದುಬೈಯಿಂದ ಆಗಮಿಸಿದ ವಿಮಾನ ಸೋಮವಾರ ಮಧ್ಯಾಹ್ನ 2.30ಕ್ಕೆ ಬೆಂಗಳೂರಿನಿಂದ ಹೊರಟಿದ್ದು, 3.30ಕ್ಕೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ.

ಅಬುಧಾಬಿಯಿಂದ ಆಗಮಿಸಿದ ವಿಮಾನ 3.30ಕ್ಕೆ ಬೆಂಗಳೂರು ವಿಮಾನ ನಿಲ್ದಾಣದಿಂದ ಹೊರಟು 4.30ಕ್ಕೆ ಮಂಗಳೂರು ತಲುಪಿದೆ. ದುಬೈ- ಮಂಗಳೂರು ವಿಮಾನದಲ್ಲಿ 150 ಪ್ರಯಾಣಿಕರಿದ್ದರೆ, ಅಬುಧಾಬಿಯಿಂದ ಆಗಮಿಸಿರುವ ವಿಮಾನದಲ್ಲಿ 130 ಪ್ರಯಾಣಿಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net