

ಕೋಲಾರ: ಜಿಲ್ಲೆಯಲ್ಲಿ ಇತ್ತೀಚೆಗೆ ಸೊಳ್ಳೆಗಳ ಜತೆಗೆ ನೊಣಗಳ ಹಾವಳಿ ಹೆಚ್ಚಾಗಿದ್ದು, ಜಾನುವಾರುಗಳ ಮೇಲೆ ಅಡ್ಡಪರಿಣಾಮ ಉಂಟಾಗಿ, ಪಶುಪಾಲಕರು ಆತಂಕ ಪಡುವಂತಾಗಿದೆ.
ಪ್ರತಿವರ್ಷ ನವೆಂಬರ್-&ಡಿಸೆಂಬರ್ ಮತ್ತು ಜನವರಿಯಲ್ಲಿ ಹಸಿರು ಹೆಚ್ಚಾಗುವ ಕಾರಣ ಸೊಳ್ಳೆ ಮತ್ತು ನೊಣಗಳ ಸಂತಾನೋತ್ಪತ್ತಿ ಹೆಚ್ಚಾಗುತ್ತದೆ. ಜನರು ನೊಣ ಮತ್ತು ಸೊಳ್ಳೆಗಳ ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಾರೆ. ಜಾನುವಾರುಗಳಿಗೆ ಯಾವುದೇ ಭದ್ರತೆ ಮಾಡದಿದ್ದರೆ ರಾಸುಗಳ ಮೈ ಮೇಲೆ ಗಾಯಗಳಾಗುವಷ್ಟರ ಮಟ್ಟಿಗೆ ಕಚ್ಚಿ ಹಿಂಸಿಸುತ್ತಿವೆ. ರಾತ್ರಿ ಸೊಳ್ಳೆಗಳ ಕಾಟವಾಗದರೆ ಹಗಲಿನ ವೇಳೆ ನೊಣಗಳ ಕಾಟದಿಂದ ಜಾನುವಾರುಗಳಿಗೆ ಗಾಯಗಳಾಗಿ ಆರೋಗ್ಯ ಹದಗೆಡುತ್ತಿದೆ. ಇದರಿಂದ ಜಾನುವಾರುಗಳ ದೇಹಕ್ಕೆ ವೈರಾಣುಗಳು ಸೇರಿ ರೋಗ ರುಜಿನಗಳಿಗೆ ತುತ್ತಾಗುತ್ತಿವೆ ಎಂದು ಪಶುಪಾಲಕರು ಅಳಲು ತೋಡಿಕೊಂಡಿದ್ದಾರೆ.
ವಿಶೇಷವಾಗಿ ಸೀಮೆ ಹಸುಗಳ ಚರ್ಮ ತೆಳುವಾಗಿರುವ ಕಾರಣ ಬಹುಬೇಗ ಸೇಮೆ ಹಸುಗಳಿಗೆ ರೋಗಗಳು ಸೊಳ್ಳೆ ಮತ್ತು ನೊಣಗಳಿಂದ ಬರುವ ಸಾಧ್ಯತೆ ಹೆಚ್ಚಾಗಿವೆ. ಮೂರು ತಿಂಗಳ ಕಾಲ ಸೊಳ್ಳೆ ಮತ್ತು ನೊಣಗಳಿಂದ ಜಾನುವಾರುಗಳನ್ನು ರಕ್ಷಣೆ ಮಾಡಿಕೊಳ್ಳುವ ಜವಾಬ್ದಾರಿ ಪಶುಪಾಲಕರ ಮೇಲಿದೆ. ಜಾನುವಾರುಗಳಿಗೆ ದನದ ಶೆಡ್ಡುಗಳನ್ನು ನಿಮಾರ್ಣ ಮಾಡಿಕೊಳ್ಳದೆ ಮನೆಗಳ ಮುಂಭಾಗವೇ ಬೀದಿಯಲ್ಲಿ ಕಟ್ಟಿಹಾಕುವವರಿಗೆ ಜಾನುವಾರು ರಕ್ಷಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ.
ಜಿಲ್ಲೆಯಲ್ಲಿ ಕೋಳಿ ಫಾರಂಗಳು ಹೆಚ್ಚಾಗಿರುವ ಕಾರಣ ಕೋಳಿಗಳು ಫಾರಂನಲ್ಲಿ ಖಾಲಿಯಾದಾಗ ಅಲ್ಲಿನ ನೊಣಗಳು ಗ್ರಾಮಗಳೊಳಗೆ ಪ್ರವೇಶ ಮಾಡುತ್ತವೆ. ಮನೆಗಳ ಮುಂಭಾಗ ಕಟ್ಟಿಹಾಕಿರುವ ಜಾನುವಾರುಗಳ ಮೇಲೆ ಕುಳಿತು ಗಾಯಗೊಳಿಸುವಂತಹ ಕೆಲಸ ಮಾಡುತ್ತಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ಪ್ರತಿ ಗ್ರಾಮದ ಬಳಿಯು ಒಂದೆರಡು ಕೋಳಿ ಫಾರಂಗಳು ಇದ್ದೇ ಇರುತ್ತವೆ. ಕೋಳಿಗಳನ್ನು ಮಾರಾಟ ಮಾಡಿದ ನಂತರ ಮತ್ತೊಂದು ಕೋಳಿಯ ಬ್ಯಾಚ್ ಬರುವ ತನಕ ಅಲ್ಲಿನ ನೊಣಗಳು ಗ್ರಾಮಗಳ ಒಳಗೆ ಪ್ರವೇಶ ಮಾಡುತ್ತವೆ. ಸೊಳ್ಳೆಗಳ ಜತೆಗೆ ನೊಣಗಳು ಜಾನುವಾರುಗಳ ಮೇಲೆ ಕುಳಿತು ಕಚ್ಚಿ ಗಾಯಗೊಳಿಸುತ್ತವೆ. ಭೂಟೆಕ್ಸ್ ಎಂಬ ಔಷಧ ಸಿಂಪಡಣೆ ಮಾಡಿದರೆ ತಕ್ಷಣಕ್ಕೆ ಪರಿಹಾರ ಸಿಗುತ್ತದೆ. ಹಸುವಿನ ಚರ್ಮದ ದಪ್ಪ ಕಡಿಮೆ ಇರುವ ಕಾರಣ ಪದೇ ಪದೇ ಈ ಔಷಧ ಸಿಂಪಡಣೆ ಮಾಡುವುದರಿಂದ ಹಸುವಿನ ಬೆಳವಣಿಗೆಯು ಕಡಿಮೆಯಾಗಿ ರೋಗಗಳಿಗೆ ತುತ್ತಾಗುವ ಸಾಧ್ಯತೆ ಇದೆ. ಗ್ರಾಮ ಪಂಚಾಯಿತಿಯವರು ನೊಣಗಳ ಮತ್ತು ಸೊಳ್ಳೆಗಳ ಹಾವಳಿ ನಿಯಂತ್ರಣ ಮಾಡಬೇಕಾಗಿದೆ. -ಮುನಿವೆಂಕಟಪ್ಪ ರೈತ, ವಾನರಾಶಿ ಭೂಮಿಯ ಮೇಲೆ ಹಸಿರು ಹೆಚ್ಚಾದಾಗ ಸೊಳ್ಳೆ ಮತ್ತು ನೊಣಗಳು ಹೆಚ್ಚಾಗುತ್ತವೆ. ಸೊಳ್ಳೆ ಪರದೆ ಅಳವಡಿಸಿಕೊಂಡು ರಕ್ಷಣೆ ಮಾಡಿಕೊಳ್ಳಬೇಕು. ನೊಣಗಳ ಹಾವಳಿಗೆ ಭೂಟೆಕ್ಸ್ ಔಷಧವನ್ನು ನೀರಿನಲ್ಲಿ ಬೆರಸಿ ಮೂರು ದಿನಕ್ಕೊಮ್ಮೆ ಸಿಂಪಡಣೆ ಮಾಡಬೇಕು. ದನದ ಕೊಠಡಿ ಶುಭ್ರವಾಗಿಟ್ಟುಕೊಳ್ಳಬೇಕು. ರಾತ್ರಿ ಬೇವಿನ ಸೊಪ್ಪಿನ ಹೊಗೆ ಹಾಕಿ ಸೊಳ್ಳೆಗಳ ನಿಯಂತ್ರ ಮಾಡಿಕೊಳ್ಳಬೇಕು. -ಡಾ.ಟಿ.ರಾಮಯ್ಯ, ಉಪನಿರ್ದೇಶಕ, ಪಶುಪಾಲನ ಇಲಾಖೆ
ರೋಗ ಲಕ್ಷಣಗಳು ಸೊಳ್ಳೆ ಮತ್ತು ನೊಣದ ಕಾಟಕ್ಕೆ ಬಲಿಯಾಗುವ ಜಾನುವಾರುಗಳ ಬೆಳವಣಿಗೆ ಕ್ಷೀಣಿಸುತ್ತದೆ. ಸೊಳ್ಳೆ ಕಚ್ಚಿದ ಗಾಯದ ಮೇಲೆ ನೊಣವೂ ಕುಳಿತು ಗಾಯಗೊಳಿಸುವುದರಿಂದ ಆ ಜಾನುವಾರಿಗೆ ಜ್ವರ ಕಾಣಿಸಿಕೊಳ್ಳುತ್ತದೆ. ಹಾಲು ಕರೆಯುವ ಹಸುವಿನಲ್ಲಿ ಕಾಣಿಸಿಕೊಂಡರೆ ಹಾಲು ಕಡಿಮೆಯಾಗುತ್ತದೆ. ವಿಶೇಷವಾಗಿ ಸೀಮೆ ಹಸುಗಳಿಗೆ ಬೂಸ, ಇಂಡಿ ಇಂತಹ ಪದಾರ್ಥಗಳಲ್ಲಿ ಸಿಹಿ ಮಿಶ್ರಣವಾಗುವುದರಿಂದ ನೊಣಗಳು ಜಾನುವಾರುಗಳ ಮೇಲೆ ಹೆಚ್ಚಾಗಿ ಕುಳಿತುಕೊಳ್ಳುತ್ತವೆ.