ಹಗಲುವೇಷ ಪ್ರದರ್ಶನ ನೀಡಿದ ಹೆಗ್ಗಳಿಕೆ

30 KMP 03
ಅಶ್ವರಾಮಣ್ಣ
Published on

ಕಂಪ್ಲಿ: ಸಂಡೂರು ತಾಲೂಕಿನ ಹಳೇ ದರೋಜಿ ಗ್ರಾಮದ ಹಗಲುವೇಷಗಾರ ಅಶ್ವ ರಾಮಣ್ಣಗೆ (68) ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಪರಿಶಿಷ್ಟ ಜಾತಿಯ ಬುಡ್ಗ ಜಂಗಮರಾಗಿದ್ದು ಬುಡ್ಗ ಮತ್ತು ತೆಲುಗು ಮಾತೃ ಭಾಷೆಯಾಗಿದ್ದರೂ ಕನ್ನಡ, ತಮಿಳು, ಹಿಂದಿ ಬಲ್ಲವರಾಗಿದ್ದಾರೆ.

ಅನೌಪಚಾರಿಕ ಶಿಕ್ಷಣವಂತರಾಗಿದ್ದು, ತಂದೆ ಅಶ್ವ ನಾಗಭೂಷಣಪ್ಪ, ತಾಯಿ ಅಶ್ವ ಪಾರ್ವತಮ್ಮ ಅವರಿಂದ ಪಾರಂಪರಿಕ ಹಗಲುವೇಷಗಾರಿಕೆ, ಸಂಗೀತದೊಂದಿಗೆ ಹಾರ್ಮೋನಿಯಂ ನುಡಿಸುವ ಅಭ್ಯಾಸ ಹೊಂದಿದ್ದಾರೆ.

ಶೂರ್ಪನಖಿಯ ಗರ್ವಭಂಗ, ಭೀಮಾಂಜನೇಯ ಯುದ್ಧ, ಮೋಹಿನಿ ಭಸ್ಮಾಸುರ, ಬೇಡರ ವೇಷ(ಸಿಂಧೂರ ಲಕ್ಷ್ಮಣ), ಜಂಗಮರ ವೇಷ, ಅರ್ಧನಾರೀಶ್ವರ, ಲಂಬಾಣಿ, ಬ್ರಾಹ್ಮಣ ಸೇರಿ ಹಲವಾರು ಸಾಮಾಜಿಕ, ಐತಿಹಾಸಿಕ, ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಕರ್ನಾಟಕ, ಆಂಧ್ರ, ತೆಲಂಗಾಣ, ತಮಿಳುನಾಡು, ಪಾಂಡಿಚೇರಿ ಸೇರಿ ದೇಶದ ನಾನಾ ರಾಜ್ಯಗಳಲ್ಲಿ ಹಗಲುವೇಷ ಪ್ರದರ್ಶನ ನೀಡಿದ ಹೆಗ್ಗಳಿಕೆ ಇವರದಾಗಿದೆ.

2014ರ ಕಲಾರತ್ನ ಪ್ರಶಸ್ತಿ, 2008ನೇಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ಬುಡಕಟ್ಟು ಕಲೋತ್ಸವ ಪ್ರಶಸ್ತಿಗಳು ಸಂದಿವೆ. ಅಶ್ವ ರಾಮಣ್ಣ ಬದುಕು, ಕಲೆ ಕುರಿತು ಡಾ.ವಿ.ನಾಗೇಶ ಬೆಟ್ಟಕೋಟೆ ಮಾರ್ಗದರ್ಶನದಲ್ಲಿ ಮಹೇಶ ಸಂಶೋಧನಾ ಅಧ್ಯಯನ ಸಂಪ್ರಬಂಧ ರಚಿಸಿದ್ದಾರೆ. ಕರ್ನಾಟಕ ಜಾನಪದ ಅಕಾಡೆಮಿಯ ನಿರ್ದೇಶಕ ಅಮರದೇವ ನಿರ್ದೇಶನದಲ್ಲಿ ಸಾಕ್ಷ್ಯಚಿತ್ರ ನಿರ್ಮಾಣಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net