

ಬೆಂಗಳೂರು: ರಾಜಧಾನಿಯಲ್ಲಿ ಸ್ವಂತ ಸೂರು ಹೊಂದುವ ಆಸೆಯಿಂದ ಖಾಸಗಿ ನಿರ್ಮಾಣ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದ 400ಕ್ಕೂ ಹೆಚ್ಚು ಮಂದಿಗೆ ಫ್ಲ್ಯಾಟ್ ವಿತರಿಸದೆ ಬಿಲ್ಡರ್ ಒಬ್ಬರು ಯೋಜನೆಯನ್ನು ಅರ್ಧಕ್ಕೆ ಕೈಬಿಟ್ಟು ಕಾಣೆಯಾಗಿರುವ ಪ್ರಕರಣ ನಡೆದಿದೆ.
ಈ ಸಂತ್ರಸ್ತರೆಲ್ಲರೂ ತಮ್ಮ ದುಡಿಮೆಯ ಹಣದ ಜತೆಗೆ ಬ್ಯಾಂಕ್‌ನಿಂದ ಸಾಲ ಮಾಡಿ ಬಿಲ್ಡರ್ ಕಂಪನಿಗೆ ಹಣ ಪಾವತಿಸಿದ್ದರು. ಆದರೆ, ಎಂಟು ವರ್ಷ ಕಳೆದರೂ ಫ್ಲ್ಯಾಟ್ ಸಿಗದ ಕಾರಣ ಇವರೆಲ್ಲರೂ ದುಬಾರಿ ಬಡ್ಡಿಯೊಂದಿಗೆ ಬ್ಯಾಂಕ್‌ಗೆ ಮಾಸಿಕ ಕಂತು ಪಾವತಿಸಲು ಪರದಾಡುತ್ತಿದ್ದಾರೆ. ವಂಚನೆಗೆ ಒಳಗಾದವರಲ್ಲಿ ಐಟಿ ಮಂದಿ, ವಾಯುಪಡೆ ಸಿಬ್ಬಂದಿ, ಮಾಜಿ ಸೈನಿಕರು, ಸರ್ಕಾರಿ ನೌಕರರೂ ಸೇರಿದ್ದಾರೆ. ಇವರೆಲ್ಲರೂ ಮಧ್ಯಮ ವರ್ಗಕ್ಕೆ ಸೇರಿದ್ದು, ಪ್ರಸ್ತುತ ಬಾಡಿಗೆ ಕಟ್ಟುವ ಜತೆಗೆ ಬ್ಯಾಂಕ್ ಕಂತು ಪಾವತಿಸಲಾಗದೆ ಡಿಾಲ್ಟರ್ಸ್ ಪಟ್ಟಿಗೆ ಸೇರುವಂತಾಗಿದೆ.
ಏನಿದು ಪ್ರಕರಣ?:
ನಗರದ ಹೊರವಲಯದಲ್ಲಿರುವ ಅತ್ತೀಬೆಲೆ - ಸರ್ಜಾಪುರ ರಸ್ತೆಯ ಬಿದಿರುಗುಪ್ಪೆಯಲ್ಲಿ ಮೆ. ಆರ್ಯನ್ ಹೋಮ್‌ಟೆಕ್ ಪ್ರೈ. ಲಿ. 6.5 ಎಕರೆ ವಿಸ್ತೀರ್ಣದಲ್ಲಿ ‘ಗೋಲ್ಡನ್ ಅರೇನಾ’ ಹೆಸರಿನ ವಸತಿ ಯೋಜನೆಯನ್ನು ಪ್ರಕಟಿಸಿತ್ತು. ಸುಮಾರು 800ಕ್ಕೂ ಹೆಚ್ಚು ್ಲ್ಯಾಟ್‌ಗಳನ್ನು ನಿರ್ಮಿಸುವ ಗುರಿಯೊಂದಿಗೆ 2015ರಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಂಡಿತ್ತು. ಸಾರ್ವಜನಿಕರು ಪ್ರತೀ ಚದರಡಿಗೆ 2,000-2,500 ರೂ. ದರದೊಂದಿಗೆ ಮುಂಗಡ, ಒಪ್ಪಂದ ಪತ್ರ ಹಾಗೂ ಕಂತು ಸೇರಿ ಶೇ.70 ಹಣವನ್ನು ಬಿಲ್ಡರ್‌ಗೆ ಪಾವತಿಸಿದ್ದರು. ನಾಲ್ಕು ವರ್ಷ ಕಳೆದರೂ ಫ್ಲ್ಯಾಟ್ ವಿತರಿಸಲು ಬಿಲ್ಡರ್ ಹಿಂದೇಟು ಹಾಕಿದರು. ಫ್ಲ್ಯಾಟ್ ನೀಡಿ, ಇಲ್ಲವೇ ಪಾವತಿಸಿದ ಹಣ ಹಿಂದಿರುಗಿಸಿ ಎಂದು ನಾಗರಿಕರು ಪಟ್ಟು ಹಿಡಿದಾಗಲೂ ಸ್ಪಂದನೆ ವ್ಯಕ್ತವಾಗಲಿಲ್ಲ. ಕೊನೆಗೆ 2020ರಲ್ಲಿ ಸಂತ್ರಸ್ತರು ತಮಗಾದ ವಂಚನೆ ಬಗ್ಗೆ ಅತ್ತೀಬೆಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
ಇದರ ಮರು ವರ್ಷವೇ (2021) ‘ರೇರಾ’ ಸಂಸ್ಥೆಗೆ ದೂರು ನೀಡಿ ನ್ಯಾಯ ಕೋರಲಾಯಿತು. ಬೆರಳೆಣಿಕೆಯಷ್ಟು ಮಂದಿ ವೈಯಕ್ತಿಕವಾಗಿ ಸಲ್ಲಿಸಿದ್ದ ದೂರು ಆಧರಿಸಿ ಪಾವತಿಸಿದ್ದ ಹಣವನ್ನು ಶೇ.2 ಬಡ್ಡಿಯೊಂದಿಗೆ 60 ದಿನದೊಳಗೆ ಹಿಂದಿರುಗಿಸುವಂತೆ ಬಿಲ್ಡರ್‌ಗೆ ಆದೇಶ ನೀಡಿತು. ವಿಚಾರಣೆಗೆ ಒಮ್ಮೆಯೂ ಬಾರದ ಬಿಲ್ಡರ್ ರೇರಾ ಆದೇಶ ಪಾಲಿಸದೆ ಮೌನಕ್ಕೆ ಶರಣಾದರು. ಈ ವಿಚಾರವಾಗಿ ಸಂತ್ರಸ್ತರು ಮತ್ತೆ ರೇರಾ ಕದ ತಟ್ಟಿದರೂ, ಸ್ಪಷ್ಟ ಪರಿಹಾರ ಸಿಗಲಿಲ್ಲ ಎಂದು ಗೋಲ್ಡನ್ ಅರೆನಾ ಫ್ಲ್ಯಾಟ್ ಖರೀದಿದಾರರ ಕಲ್ಯಾಣ ಸಂಘದ ಪದಾಧಿಕಾರಿಗಳು ‘ವಿಜಯವಾಣಿ’ ಕಚೇರಿಗೆ ಆಗಮಿಸಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಹಣ ಪಾವತಿಸುವ ವೇಳೆ ಬೇಗನೆ ಕಟ್ಟಡ ನಿರ್ಮಿಸಿ ಫ್ಲ್ಯಾಟ್ ನೋಂದಣಿ ಮಾಡಿಕೊಡುವುದಾಗಿ ಬಿಲ್ಡರ್ ಕಂಪನಿ ಭರವಸೆ ನೀಡಿತ್ತು. ಏಳೆಂಟು ವರ್ಷಗಳೇ ಕಳೆದರೂ ಭರವಸೆ ಈಡೇರಿಲ್ಲ. ಫ್ಲ್ಯಾಟ್ ಖರೀದಿಸಿರುವವರ ಪೈಕಿ ಬಹುತೇಕ ಮಂದಿ ಹೊರ ರಾಜ್ಯಕ್ಕೆ ಸೇರಿದವರಿದ್ದಾರೆ. ಬಿಲ್ಡರ್ ಸಂಪರ್ಕಿಸಲು ಯತ್ನ ಸಲವಾಗಿಲ್ಲ. ರೇರಾದಿಂದಲೂ ನಮಗೆ ಸ್ಪಷ್ಟ ಪರಿಹಾರ ಸಿಗದ ಕಾರಣ ದಿಕ್ಕುತೋಚದಂತಾಗಿದೆ.
- ತನ್ಮಯ್ ದೇವ್, ಅಧ್ಯಕ್ಷ, ಗೋಲ್ಡನ್ ಅರೆನಾ ಖರೀದಿದಾರರ ಕಲ್ಯಾಣ ಸಂಘ
ಮನೆಯವರ ಒತ್ತಾಯಕ್ಕೆ ಮಣಿದು ಬ್ಯಾಂಕ್ ಸಾಲ ಮಾಡಿ ಫ್ಲ್ಯಾಟ್ ಖರೀದಿಸಿದೆ. ಶೇ.70 ಹಣ ಪಾವತಿಸಿ ಆರು ವರ್ಷ ಕಳೆದರೂ ಈತನಕ ನಮಗೆ ಸೂರು ಒದಗಿಸಿಲ್ಲ. ಈಗ ಬಾಡಿಗೆ ಹಣದ ಜತೆಗೆ ಬ್ಯಾಂಕ್ ಕಂತು ಪಾವತಿಸುವುದು ಕಷ್ಟವಾಗಿದೆ. ಹಣ ನೀಡಿದ್ದರೂ ನಮ್ಮ ಹೆಸರಿಗೆ ನೋಂದಣಿಯಾಗದ ಕಾರಣ ಫ್ಲ್ಯಾಟ್ ಸಿಗುವುದೇ, ಇಲ್ಲವೆ ಎಂಬ ಭಯ ಕಾಡುತ್ತಿದೆ.
- ರಾಜೇಶ್ ವೈ, ಜೆ.ಪಿ.ನಗರ (ಫ್ಲ್ಯಾಟ್ ಖರೀದಿದಾರ)