ನವೋದ್ಯಮಿಗಳಿಗಾಗಿ ಶೀಘ್ರ ಫ್ಲ್ಯಾಟ್ ಫ್ಯಾಕ್ಟರಿ, ಕಿಯೋನಿಕ್ಸ್ ಅಧ್ಯಕ್ಷ ಶರತ್ ಕುಮಾರ ಬಚ್ಚೇಗೌಡ ಹೇಳಿಕೆ

IMG_20240829_211145_462.jpg
Published on

ಹುಬ್ಬಳ್ಳಿ: ನವೋದ್ಯಮಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಚೀನಾ ಮಾದರಿಯಲ್ಲಿ ಫ್ಲ್ಯಾಟ್ ಫ್ಯಾಕ್ಟರಿ (ಒಂದೇ ಕಟ್ಟಡದಲ್ಲಿ ಹಲವು ಅನುಕೂಲ) ನಿರ್ಮಾಣ ಮಾಡಿಕೊಡಲಾಗುವುದು, ಇದಕ್ಕಾಗಿ ಹುಬ್ಬಳ್ಳಿಯಲ್ಲಿ 2 ಎಕರೆ, ಬೆಳಗಾವಿಯಲ್ಲಿ 5 ಎಕರೆ ಜಾಗ ಲಭ್ಯವಿದೆ ಎಂದು ಶಾಸಕ ಹಾಗೂ ಕಿಯೋನಿಕ್ಸ್ ಅಧ್ಯಕ್ಷ ಶರತ್ ಕುಮಾರ ಬಚ್ಚೇಗೌಡ ಹೇಳಿದರು.

ಇಲ್ಲಿಯ ಖಾಸಗಿ ಹೋಟೆಲ್ ನಲ್ಲಿ ಗುರುವಾರ ಏರ್ಪಡಿಸಿದ್ದ ಬಿಯಾಂಡ್ ಬೆಂಗಳೂರು, ಹುಬ್ಬಳ್ಳಿ ಧಾರವಾಡ ಬೆಳಗಾವಿ ಟೆಕ್ಸಲರೇಶನ್- 2024 ಸಮಾವೇಶದ ಸಮಾರೋಪದಲ್ಲಿ ಅತಿಥಿಗಳಾಗಿ ಅವರು ಮಾತನಾಡಿದರು.

ನಾಲ್ಕು- ಐದು ಅಂತಸ್ತಿನ ಪ್ಲ್ಯಾಟ್ ಫ್ಯಾಕ್ಟರಿಯಲ್ಲಿ ಡ್ರೋಣ್, ಬ್ಯಾಟರಿ ಟೆಕ್ನಾಲಜಿ ಹಾಗೂ ಇಲೆಕ್ಟ್ರಾನಿಕ್ಸ್ ಸಿಸ್ಟ್ಂ ಡಿಸೈನ್ ಆಂಡ್ ಮ್ಯಾನುಫ್ಯಾಕ್ಚರಿಂಗ್ (ಎಎಸ್ಡಿಎಂ) ಕ್ಲಸ್ಟರ್ ಗಳಿಗೆ ಅನುಕೂಲ ಮಾಡಿಕೊಡಲಾಗುವುದು, ಮುಂದಿನ ತಿಂಗಳು ಬೆಳಗಾವಿ ಟೆಕ್ ಸಮ್ಮಿಟ್ನಲ್ಲಿ ಚರ್ಚಿಸಿ ಸೂಕ್ತ ವ್ಯವಸ್ಥೆ ಮಾಡುತ್ತೇವೆ ಎಂದರು.

ಹುಬ್ಬಳ್ಳಿ ಐಟಿ ಪಾರ್ಕ್ ಅನ್ನು ಪುನರ್ ನವೀಕರಣ ಮಾಡಲಾಗುವುದು. ವಿದ್ಯುತ್, ನೀರು, ಒಳಚರಂಡಿ ವ್ಯವಸ್ಥೆ ಸೇರಿ ಸಕಲ ಸವಲತ್ತುಗಳನ್ನು ಕಲ್ಪಿಸಲಾಗುವುದು. ಈಗಾಗಲೇ ಸ್ಥಳ ಪರಿಶೀಲನೆ ಮಾಡಿ ಸಮಸ್ಯೆಗಳನ್ನು ಆಲಿಸಲಾಗಿದೆ. "ಗ್ಲೋಬಲ್ ಟೆಕ್ನಾಲಜಿ ಸೆಂಟರ್' ಮಾಡಿ ಇದಕ್ಕೆ ಹೊಸ ರೂಪ ನೀಡಿ, ಇಲ್ಲಿ ಖಾಲಿ ಇರುವ 2.5 ಲಕ್ಷ ಅಡಿ ಜಾಗವನ್ನು ಸದ್ಬಳಕೆ ಮಾಡಿಕೊಳ್ಳಲಾಗುವುದು. ಬಿಯಾಂಡ್ ಬೆಂಗಳೂರು ಪರಿಕಲ್ಪನೆಯನ್ನು ಸಮರ್ಪಕವಾಗಿ ಜಾರಿ ಮಾಡುತ್ತೇವೆ ಎಂದರು.

ಬಿಯಾಂಡ್ ಬೆಂಗಳೂರು ಕಲ್ಪನೆಗೆ ಅನೇಕ ಕಂಪನಿಗಳು ಓಗೊಟ್ಟಿವೆ. ಈಗಾಗಲೇ 30ಕ್ಕೂ ಹೆಚ್ಚು ಕಂಪನಿಗಳು ಬೆಂಗಳೂರಿನಾಚೆ ಬಂದಿವೆ. ಅವು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ರಾಜ್ಯದ ಪ್ರತಿ ವಲಯವೂ ಅಭಿವೃದ್ಧಿಯಾಗಬೇಕು. ಅಲ್ಲಿನ ವಿದ್ಯಾವಂತರು ಅದೇ ಜಾಗದಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಎಲ್ಲ ಅನುಕೂಲ ಮಾಡಿಕೊಡುತ್ತೇವೆ ಎಂದು ಭರವಸೆ ನಿಡಿದರು.

ತ್ರಿವಳಿ ನಗರ ಅಭಿವೃದ್ಧಿ:
ಹುಬ್ಬಳ್ಳಿ ಧಾರವಾಡ ಬೆಳಗಾವಿ ತ್ರಿವಳಿ ನಗರಗಳು ಐತಿಹಾಸಿಕ ಹಿನ್ನೆಲೆ ಹೊಂದಿದ್ದು, ವಿಶೇಷ ವಲಯವಾಗಿ ಪರಿಗಣಿಸಲಾಗಿದೆ. ಉದ್ಯಮಶೀಲತೆ ಬೆಳೆಸಲು ಅತ್ಯಂತ ಸೂಕ್ತ ಸ್ಥಳವಾಗಿದೆ. ಅತಿ ಹೆಚ್ಚು ಕೈಗಾರಿಕಾ ಸ್ನೇಹಿ ವಾತಾವರಣ ಇದೆ. ರಾಜ್ಯ ಸರ್ಕಾರ ಇದನ್ನು ಸದ್ಬಳಕೆ ಮಾಡಿಕೊಳ್ಳಲಿದೆ ಎಂದು ಶರತ್ ಕುಮಾರ ತಿಳಿಸಿದರು.

ಸ್ಟಾರ್ಟ್ ಅಪ್, ಇನ್ ಕ್ಯೂಬೇಷನ್ ಸೆಂಟರ್ ಗಳಂತಹ ಸೌಲಭ್ಯಗಳನ್ನು ಕಲ್ಪಿಸಿ, ಕೈಗಾರಿಕೋದ್ಯಮಕ್ಕೆ ಪೂರಕ ವಾತವಾರಣ ನಿಮಿರ್ಸಲಾಗುವುದು. ರಾಜ್ಯದಲ್ಲಿ 3.7 ಲಕ್ಷ ಕೋಟಿ ರೂ. ಇಲೆಕ್ಟ್ರಾನಿಕ್ಸ್ ವಲಯದ ವಹಿವಾಟು ಇದ್ದು, ಇದನ್ನು 5 ಲಕ್ಷ ಕೋಟಿಗೆ ವೃದ್ಧಿಸುವ ಗುರಿ ಹೊಂದಲಾಗಿದೆ. ಇದಕ್ಕೆ ಬಿಯಾಂಡ್ ಬೆಂಗಳೂರು ಪೂರಕವಾಗಲಿದೆ ಎಂದರು.

ಐಟಿ, ಬಿಟಿ ಇಲಾಖೆ ನಿರ್ದೇಶಕ ದರ್ಶನ್ ಎಚ್.ವಿ. ಮಾತನಾಡಿ, ರಾಜ್ಯ ಸರ್ಕಾರವು ಕರ್ನಾಟಕದಲ್ಲಿ ಕೈಗಾರಿಕೋದ್ಯಮ ಬೆಳವಣಿಗೆಗೆ ಸೌಲಭ್ಯಗಳ ಪೂರೈಕೆದಾರನಾಗಿ ಕೆಲಸ ಮಾಡಲಿದೆ. ಇದಕ್ಕಾಗಿ ಹಲವು ಕೈಗಾರಿಕಾ ನೀತಿಗಳನ್ನು ಜಾರಿಗೆ ತಂದಿದೆ. ಬೆಂಗಳೂರಿನ ಆಚೆಗೂ ಉದ್ಯಮ ಬೆಳವಣಿಗೆಗೆ ಹಲವು ಉಪಕ್ರಮಗಳನ್ನು ಕೈಗೊಂಡಿದೆ. ಸ್ಟಾರ್ಟ್ ಅಪ್ ಗಳಿಗೆ ಉತ್ತೇಜನ ನೀಡಲಾಗುತ್ತಿದೆ ಎಂದರು.

ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಸಿಇಒ ಸಂಜೀವ್ ಗುಪ್ತಾ ಮಾತನಾಡಿ, ಹುಬ್ಬಳ್ಳಿಯಲ್ಲಿ 4ನೇ ಕಾರ್ಯಕ್ರಮ ಇದಾಗಿದೆ. ಬೆಂಗಳೂರಿನಾಚೆಗೆ ಆರು ಕ್ಲಸ್ಟರ್ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ. ಈಗಾಗಲೇ ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ- ಬೆಳಗಾವಿ ಕ್ಲಸ್ಟರ್ ಕಾರ್ಯಪ್ರವೃತ್ತವಾಗಿವೆ ಎಂದರು.

ಐಯೊನ್ಐಡಿಯಾ ಕಂಪನಿಯ ಬೃಂದಲಾ ಮಲ್ಲಪ್ಪ, ಟೆಸ್ಸೊಲ್ವ ಸೆಮಿಕಂಡಕ್ಟರ್ ಅಧ್ಯಕ್ಷ ಡಾ. ವಿ. ವೀರಪ್ಪನ್, ಡಾ. ಪ್ರದಿಪ್ ಠಾಕರೆ, ವೆಂಕಟೇಶ ಪಾಟೀಲ, ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net