

ಬಾಳೆಹೊನ್ನೂರು: ಮಾಗುಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನವಳ್ಳಿ-ಮಹಲ್ಗೋಡು ವ್ಯಾಪ್ತಿಯಲ್ಲಿ ಸುರಿದ ಧಾರಾಕಾರ ಮಳೆಗೆ ದಿಢೀರ್ ಪ್ರವಾಹ ಉಂಟಾಗಿ ಬಾಳೆಹೊನ್ನೂರು-ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಮಹಲ್ಗೋಡು ಸೇತುವೆ ಮೇಲೆ ನೀರು ಉಕ್ಕಿ ಹರಿದು ಎರಡು ಗಂಟೆಗೂ ಅಧಿಕ ಕಾಲ ರಸ್ತೆ ಸಂಪರ್ಕ ಕಡಿತಗೊಂಡಿತ್ತು.
ಬಾಳೆಹೊನ್ನೂರಿನಿಂದ ಕಳಸ-ಹೊರನಾಡಿಗೆ ತೆರಳುವ ಮಾರ್ಗದ ಮಹಲ್ಗೋಡು ಸುತ್ತಮುತ್ತ ಹರಿಯುವ ಕಿರು ಹಳ್ಳಗಳಾದ ದೊಡ್ಡಕಟ್ಟು, ಸಣ್ಣಕಲ್ಲುಗಂಡಿ, ದೊಡ್ಡಕಲ್ಲುಗಂಡಿ, ಗೊರಸನಗದ್ದೆ, ಮಹಲ್‌ಗೋಡು ಎಸ್ಟೇಟ್‌ಹಳ್ಳ, ನೇಮನಹಳ್ಳಿ, ಬಹಿಷ್ಕಾರ್, ಹೊನ್ನವಳ್ಳಿ, ಕಬ್ಬಿನ ಮಣ್ಣು ಕಿರು ಹಳ್ಳಗಳಲ್ಲಿನ ನೀರು ಹೊನ್ನವಳ್ಳಿ-ಮಹಲ್ಗೋಡು ಸೇತುವೆ ಮೂಲಕ ಹಾದು ಭದ್ರಾನದಿ ಸೇರುತ್ತದೆ. ಈ ಕಿರು ಹಳ್ಳಗಳು ಹರಿಯುವ ವ್ಯಾಪ್ತಿಯಲ್ಲಿ ಸೋಮವಾರ ಮಧ್ಯಾಹ್ನ 3.30ರ ವೇಳೆಗೆ ಧಾರಾಕಾರ ಮಳೆ ಸುರಿದಿದ್ದು, ಭಾರೀ ಪ್ರಮಾಣದ ನೀರು ಒಮ್ಮೆಲೆ ಹೊನ್ನವಳ್ಳಿ-ಮಹಲ್ಗೋಡು ಸೇತುವೆ ಪ್ರವೇಶಿಸಿದೆ. ಇದರಿಂದ ನೀರು ಮುಖ್ಯರಸ್ತೆ ಮೇಲೆ ಸಂಪೂರ್ಣ ನೀರು ಹಾದು ಸಂಪರ್ಕ ಕಡಿತಗೊಂಡಿತ್ತು.
ಸೇತುವೆ ಮೇಲೆ ಭಾರೀ ಪ್ರಮಾಣದ ನೀರು ಹರಿದಿದ್ದರಿಂದ ಎರಡೂ ಬದಿಗಳಲ್ಲಿ ಬಸ್ ಸೇರಿದಂತೆ ಪ್ರವಾಸಿ ವಾಹನಗಳು ಸೇತುವೆ ಮೇಲೆ ಸಾಲುಗಟ್ಟಿ ನಿಂತಿದ್ದವು. ನೀರಿನ ಹರಿವಿನ ರಭಸಕ್ಕೆ ಮೂರು ಹಸುಗಳು ಕೊಚ್ಚಿಕೊಂಡು ಹೋಗಿವೆ. ನೀರಿನ ಪ್ರವಾಹ ಕಡಿಮೆಯಾದ ಬಳಿಕ ವಾಹನ ಸಂಚಾರ ಮತ್ತೆ ಆರಂಭಗೊಂಡಿತ್ತು.
ಹೊನ್ನವಳ್ಳಿ-ಮಹಲ್ಗೋಡು ಸೇತುವೆ ನೆಲಮಟ್ಟದಿಂದ ಕಡಿಮೆ ಎತ್ತರದಲಿದ್ದು, ಭಾರೀ ಮಳೆ ಬಂದಾಗ ಇಲ್ಲಿ ಸಂಪರ್ಕ ಕಡಿತಗೊಳ್ಳುತ್ತಲೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಸೇತುವೆ ಎತ್ತರಿಸುವ ಕೆಲಸವಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಬಾಳೆಹೊನ್ನೂರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ವಿವಿಧ ಪ್ರದೇಶಗಳಲ್ಲಿ ಸೋಮವಾರ ಮಧ್ಯಾಹ್ನದ ನಂತರ ಗುಡುಗು ಸಹಿತ ಸಾಧಾರಣ ಮಳೆಯಾಗಿದೆ.