ಅರಣ್ಯಾಧಿಕಾರಿ ಕಚೇರಿ ಎದುರು ಪಂಜಿನ ಮೆರವಣಿಗೆ

Ksd_procession
Published on

ಕಾಸರಗೋಡು: ಮುಳಿಯಾರು, ಕಾರಡ್ಕ ಗ್ರಾ.ಪಂ. ವ್ಯಾಪ್ತಿಯಲ್ಲಿ ಚಿರತೆ ಕಾಟ ಮುಂದುವರಿದಿದ್ದು, ಚಿರತೆ ಬಗ್ಗೆ ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ ಕ್ರಮದಿಂದ ಆಕ್ರೋಶಿತರಾದ ನಾಗರಿಕ ಒಕ್ಕೂಟ ಬುಧವಾರ ರಾತ್ರಿ ಕರ್ಮಂತೋಡಿಯಲ್ಲಿರುವ ಅರಣ್ಯ ಇಲಾಖೆ ಕಚೇರಿಗೆ ಪಂಜಿನ ಮೆರವಣಿಗೆ ನಡೆಸಿ ಆತಂಕ ವ್ಯಕ್ತಪಡಿಸಿದರು.

ಜನರು ಮನೆಯಿಂದ ಹೊರಗೆ ಇಳಿಯಲೂ ಭಯಪಡುತ್ತಿದ್ದಾರೆ. ಕಳೆದ ಒಂದು ವಾರದ ಅವಧಿಯಲ್ಲಿ ಮುಳಿಯಾರು ಆಸುಪಾಸಿನ ವಿವಿಧೆಡೆ ಚಿರತೆ ಸಂಚರಿಸುತ್ತಿರುವುದನ್ನು ನಾಗರಿಕರು ಕಂಡಿದ್ದು, ಈ ಪ್ರದೇಶದ ಜನತೆ ಭಯದಿಂದ ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ.

ಕಾರಡ್ಕ ಕರ್ಮಂತೋಡಿ ಸನಿಹದ ಅಡ್ಕತ್ತೊಟ್ಟಿ ಎಂಬಲ್ಲಿ ಬುಧವಾರ ರಾತ್ರಿ ಚಿರತೆಯೊಂದು ಮನೆಯಂಗಳಕ್ಕೆ ಧಾವಿಸಿ ಬಂದು ಸಾಕು ನಾಯಿಯನ್ನು ಹೊತ್ತೊಯ್ದಿದೆ. ಬಳಿಕ ನಾಗರಿಕರು ಹುಡುಕಾಡಿದಾಗ ಚಿರತೆಯ ಹೆಜ್ಜೆ ಗುರುತು ಕಂಡುಬಂದಿದ್ದು, ಚಿರತೆ ಕಾಡಿನ ಹಾದಿಯಾಗಿ ಸಾಗಿರುವುದನ್ನು ಖಚಿತಪಡಿಸಿಕೊಂಡಿದ್ದರು.

ಇರಿಯಣ್ಣಿಯಲ್ಲಿ ಗುರುವಾರ ಬೆಳಗ್ಗೆ ಚಿರತೆ ಸಂಚರಿಸುತ್ತಿರುವುದನ್ನು ಸ್ಥಳೀಯರೊಬ್ಬರು ಕಂಡಿರುವುದಾಗಿ ಮಾಹಿತಿಯಿದೆ. ಕಳೆದ ವಾರ ಮುಳಿಯಾರು, ಕಾರಡ್ಕ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವೆಡೆ ಚಿರತೆ ಕಂಡುಬಂದಿದೆ. ಇತ್ತೀಚೆಗೆ ಸತತ ಎರಡು ದಿವಸ ಬೋವಿಕಾನ ಪೇಟೆಯಲ್ಲೂ ಚಿರತೆ ಕಂಡುಬಂದಿತ್ತು. ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಕಾಡಿನಲ್ಲಿ ಬೋನು ಇರಿಸಿದ್ದರೂ ಈವರೆಗೆ ಒಂದೂ ಚಿರತೆ ಬೋನಿಗೆ ಬಿದ್ದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net