ಜಿಲ್ಲೆಯಲ್ಲಿ 79ನೇ ಸ್ವಾತಂತ್ರ್ಯ ದಿನ ಸಂಭ್ರಮ

fl
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶುಕ್ರವಾರ ದೇವನಹಳ್ಳಿ ಪಟ್ಟಣದ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ 79ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಧ್ವಜಾರೋಹಣ ನೆರವೇರಿಸಿದರು. ಅಲಂಕೃತ ಧ್ವಜಸ್ತಂಭಕ್ಕೆ ನಮನ ಸಲ್ಲಿಸಿದ ಸಚಿವರು ತ್ರಿವರ್ಣ ಧ್ವಜಕ್ಕೆ ಗೌರವ ವಂದನೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಸಚಿವರು ಹಾಗೂ ಗಣ್ಯರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ವಿವಿಧ ಶಾಲಾ ವಿದ್ಯಾರ್ಥಿಗಳ ತಂಡಗಳಿಂದ ದೇಶಭಕ್ತಿ ಗೀತೆಯ ನೃತ್ಯ ಪ್ರದರ್ಶನ ನಡೆಯಿತು. ಪೊಲೀಸ್ ಕವಾಯತು ಗಮನ ಸೆಳೆಯಿತು. ಪೊಲೀಸ್ ಪರೇಡ್ ಹಾಗೂ ವಿದ್ಯಾರ್ಥಿಗಳ ಪರೇಡ್‌ನಿಂದ ಸಚಿವರು ಗೌರವ ರಕ್ಷೆ ಸ್ವೀಕರಿಸಿದರು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರ ಅಧ್ಯಕ್ಷ ಶಾಂತಕುಮಾರ್, ಜಿಲ್ಲಾಧಿಕಾರಿ ಎ.ಬಿ ಬಸವರಾಜು ಜಿಪಂ ಸಿಇಒ ಡಾ.ಕೆ.ಎನ್. ಅನುರಾಧಾ, ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಕೆ ಬಾಬಾ ಮತ್ತಿತರು ಹಾಜರಿದ್ದರು.

 ಸಾವಿರ ಕೋಟಿ ರೂ.ಅಭಿವೃದ್ಧಿ: ರಾಜ್ಯದಲ್ಲಿಯೇ ಪ್ರಪ್ರಥಮ ಜಿಲ್ಲೆಯಾಗಿ ಗ್ರಾಮಾಂತರದಲ್ಲಿ ಸರ್ಕಾರದ ಎರಡು ವರ್ಷಗಳ ಸಾಧನಾ ಸಮಾವೇಶ ಆಯೋಜಿಸಿ 1 ಸಾವಿರ ಕೋಟಿ ರೂ. ಗಳಿಗೂ ಹೆಚ್ಚು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ, ಉದ್ಘಾಟನೆಯನ್ನು ಮುಖ್ಯಮಂತ್ರಿ ನೆರವೇರಿಸಿದ್ದಾರೆ. ದೇವನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ 50 ಕೋಟಿ ರೂ.ವಿಶೇಷ ಅನುದಾನ ನೀಡಿದ್ದು, ಆದ್ಯತೆ ಮೇಲೆ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುವುದು ಎಂದು ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ವೇದಿಕೆ ಭಾಷಣದಲ್ಲಿ ತಿಳಿಸಿದರು.ದೇವನಹಳ್ಳಿವರೆಗೆ ಮೆಟ್ರೋ ವಿಸ್ತರಣೆಯನ್ನು ಮಾಡಲು 2025-26ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಲಾಗಿದೆ. ಕಂದಾಯ ಇಲಾಖೆಯಡಿ ಫವತಿ ಖಾತಾ ಬದಲಾವಣೆಗೆ ಆಂದೋಲನ ಪ್ರಾರಂಭಿಸಿದ್ದು, ಜಿಲ್ಲೆಯ 4 ತಾಲೂಕಿನಲ್ಲಿ 84,341 ಸರ್ವೇ ನಂಬರ್ ಖಾತೆದಾರರು ಫವತಿಯಾಗಿದ್ದು, ಕಳೆದ ಜುಲೈ ತಿಂಗಳಿಂದ ಈಗಾಗಲೇ 2,187 ಖಾತೆ ಮಾಡಲಾಗಿದೆ. ಉಳಿದ ಖಾತೆದಾರರ ವಾರಸುದಾರರಿಗೆ ಖಾತೆ ಬದಲಾವಣೆಗೆ ವ್ಯಾಪಕ ಪ್ರಚಾರ ಮಾಡಿ ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಿದರು.

ಎತ್ತಿನಹೊಳೆ ಶೀಘ್ರ: ದೇವನಹಳ್ಳಿ ಕ್ರೀಡಾಂಗಣವನ್ನು 13.42 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಸರ್ಕಾರ ಮಂಜೂರಾತಿ ನೀಡಿದ್ದು, ಕೂಡಲೇ ಕಾಮಗಾರಿ ಪ್ರಾರಂಭಿಸಲಾಗುವುದು. 2027ರ ವೇಳೆಗೆ ಎತ್ತಿನ ಹೊಳೆ ನೀರನ್ನು ಜಿಲ್ಲೆಗೆ ತರುವ ಗುರಿ ಹೊಂದಲಾಗಿದ್ದು, ಈ ಯೋಜನೆಯಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಹುಭಾಗ ನೀರಾವರಿ ಸೌಲಭ್ಯ ಹೊಂದಲಿದ್ದು, ಈ ಭಾಗದ ರೈತರ ಬಹು ದಿನಗಳ ಕನಸು ಸಾಕಾರಗೊಳಲಿದೆ ಎಂದು ಸಚಿವರು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net