

ಕಾರ್ಕಳ: ವೇದಮಾತೆ ರಕ್ಷಣೆ, ಭೂಮಾತೆ ರಕ್ಷಣೆ ಮಾಡುತ್ತಾ ನಮ್ಮಲ್ಲಿ ಅಡಗಿರುವ ಅಂತರ್ ಶಕ್ತಿಯ ಉದ್ದೀಪನ ಆಗಬೇಕಾಗಿದೆ. ಅಂತರಂಗ ಶಕ್ತಿ ಜಾಗೃತಗೊಳಿಸಿ, ಶೋಧಿಸಿ, ಸಾಧಿಸಿ ಪೋಷಿಸಬೇಕು, ದೇಶಕ್ಕಾಗಿ ನಾನಾಗಬೇಕೇ ಹೊರತು ನನಗಾಗಿ ದೇಶ ಅಲ್ಲ. ಕನಿಷ್ಠ ಅವಧಿಯಲ್ಲಿ ಗರಿಷ್ಠ ಸಾಧನೆ ಮಾಡಬೇಕು ಎಂದು ಬಸ್ರೂರು ಶಾರದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಚಂದ್ರಪ್ರಭಾ ಹೆಗ್ಡೆ ಹೇಳಿದರು.
ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳ ಶೈಕ್ಷಣಿಕ ಸಹಭಾಗಿತ್ವದ ತ್ರಿಶಾ ಪದವಿ ಪೂರ್ವ ಕಾಲೇಜು ಕಲ್ಯಾಣಪುರದಲ್ಲಿ ಧ್ವಜಾರೋಹಣಗೈದು ಮಾತನಾಡಿದರು. ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕ ಡಾ.ಬಿ.ಗಣನಾಥ ಶೆಟ್ಟಿ, ವಿಮಲ್ ರಾಜ್ ಜಿ., ತ್ರಿಶಾ ಫೌಂಡೇಶನ್ ಅಧ್ಯಕ್ಷ ಪ್ರಭಾಕರ್ ಭಂಡಾರಿ, ಕಾರ್ಯದರ್ಶಿ ಸರಿತಾ ಭಂಡಾರಿ, ಟ್ರಸ್ಟಿ ಕಾರ್ತಿಕ್ ಭಂಡಾರಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಹೆಗಡೆ ಸ್ವಾಗತಿಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿ ಪೃಥ್ವಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.