

ಮಡಿಕೇರಿ:
ಜಿಲ್ಲಾಡಳಿತ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವತಿಯಿಂದ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಗುರುವಾರ ನಡೆಯಿತು. ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನದ ಆವರಣದಲ್ಲಿನ ಯುದ್ಧ ಸ್ಮಾರಕಕ್ಕೆ ಕೂಡಿಗೆ ಸೈನಿಕ ಶಾಲೆಯ ಪ್ರಾಂಶುಪಾಲ ಕ. ಅಮರ್ ಜೀತ್‌ಸಿಂಗ್, ಜಿ.ಪಂ. ಸಿಇಒ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಎನ್‌ಸಿಸಿ ಅಧಿಕಾರಿ ಕರ್ನಲ್ ಜೆಫಿರಿನ್ ಅರಾನ್ಹಾ ಏರ್ ಮಾರ್ಷಲ್(ನಿವೃತ್ತ) ಕೆ.ಸಿ. ಕಾರ್ಯಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್. ವೀಣಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್, ಏರ್ ಕಮಾಂಡರ್(ನಿವೃತ್ತ) ಕಂಬಿರಂಡ ದೇವಯ್ಯ, ಲೆ.ಕರ್ನಲ್(ನಿವೃತ್ತ) ಎಂ.ನಾಚಪ್ಪ, ಮೇಜರ್(ನಿವೃತ್ತ) ಒ.ಎಸ್.ಚಿಂಗಪ್ಪ, ಮಡಿಕೇರಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕುಟ್ಟಪ್ಪ, ಆದಾಯ ತೆರಿಗೆ ಇಲಾಖೆ ಅಧಿಕಾರಿ ಗಿರೀಶ್, ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಾಲಸುಬ್ರಮಣ್ಯಂ ಮತ್ತಿತರರು ಪುಷ್ಪ ಗುಚ್ಛವಿರಿಸಿ, ಗೌರವ ನಮನ ಸಲ್ಲಿಸಿದರು. ಪೊಲೀಸ್ ಇಲಾಖೆಯಿಂದ ಮೂರು ಸುತ್ತು ಕುಶಾಲತೋಪು ಹಾರಿಸಿ ಗೌರವ ವಂದನೆ ಸಲ್ಲಿಸಿ, ಮೌನಾಚರಿಸಲಾಯಿತು. ಜಿ.ಪಂ.ಸಿಇಒ ವರ್ಣಿತ್ ನೇಗಿ ಅವರು ಸಶಸ್ತ್ರ ಪಡೆಗಳ ಧ್ವಜ ಬಿಡುಗಡೆ ಮಾಡಿದರು.
ಪೊಲೀಸ್ ಇಲಾಖೆಯ ಎಆರ್‌ಎಸ್‌ಐ ಚೆನ್ನಕೇಶವ ಗೌರವ ವಂದನೆ ನಡೆಸಿಕೊಟ್ಟರು. ಪೊಲೀಸ್ ಬ್ಯಾಂಡ್ ನೇತೃತ್ವ ವಹಿಸಿದ್ದ ಸಿದ್ದೇಶ್ ತಂಡದವರು ಪೊಲೀಸ್ ವಾದ್ಯದೊಂದಿಗೆ ಗೌರವ ನಮನ ಸಲ್ಲಿಸಿದರು. ಮಾಜಿ ಸೈನಿಕರು, ಪೊಲೀಸರು, ಸೈನಿಕ ಶಾಲೆಯ ಎನ್‌ಸಿಸಿ ವಿದ್ಯಾರ್ಥಿಗಳು, ಇತರರು ಗೌರವ ಸಲ್ಲಿಸಿದರು.
ಬಳಿಕ ಮಾತನಾಡಿದ ಏರ್ ಮಾರ್ಷಲ್(ನಿವೃತ್ತ) ಕೆ.ಸಿ. ಕಾರ್ಯಪ್ಪ ರಾಷ್ಟ್ರದ ಗಡಿ ಪ್ರದೇಶದಲ್ಲಿ ಹಗಲಿರುಳು ಶ್ರಮಿಸುವ ವೀರ ಯೋಧರ ಧೈರ್ಯ, ಸಾಹಸವನ್ನು ಪ್ರತಿಯೊಬ್ಬರೂ ಪ್ರಶಂಸಿಸಬೇಕು. ವೀರ ಸೇನಾನಿಗಳ ಕಷ್ಟಕ್ಕೆ ಸ್ಪಂದಿಸಬೇಕು, ಹುತಾತ್ಮ ಯೋಧರನ್ನು ಸದಾ ಸ್ಮರಿಸಬೇಕು ಎಂದರು.