

ಮಂಡ್ಯ: ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ 3 ದಿನ ನಡೆಯುವ ಧ್ವಜಾರೋಹಣ ಕಾರ್ಯಕ್ರಮ ಆಕರ್ಷಣೀಯವಾಗಿರಬೇಕು. ಇದಕ್ಕೆ ಸಂಬಂಧಿಸಿದ ಕಾರ್ಯವೈಖರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಜವಾಬ್ದಾರಿ ಧ್ವಜ ಸಮಿತಿ ಮೇಲಿದೆ ಎಂದು ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಧ್ವಜ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮ್ಮೇಳದ ಉದ್ಘಾಟನೆ ಧ್ವಜರೋಹಣದಿಂದಲೇ ನಡೆಯುವುದರಿಂದ ಸಮಿತಿಯ ಕಾರ್ಯ ಕ್ರಿಯಾಶೀಲತೆಯಿಂದ ಕೂಡಿರಬೇಕು. ಧ್ವಜ ಸ್ತಂಭಗಳನ್ನು ಸಮ್ಮೇಳನ ನಡೆಯುವ ಮುಖ್ಯದ್ವಾರದ ಬಾಗಿಲಿನ ಮುಂಭಾಗದಲ್ಲಿ ಸ್ಥಾಪಿಸಲಾಗುವುದು. ಒಟ್ಟು ಮೂರು ಧ್ವಜಸ್ತಂಭಗಳಿದ್ದು, ಮೊದಲ ಸ್ತಂಭ ರಾಷ್ಟ್ರಧ್ವಜ ಎತ್ತರವಗಿರುತ್ತದೆ. ಎರಡನೇ ಧ್ವಜ ಸ್ತಂಭ ನಾಡಧ್ವಜ ಹಾಗೂ ಮೂರನೇ ಧ್ವಜ ಸ್ತಂಭ ಕನ್ನಡ ಸಾಹಿತ್ಯ ಪರಿಷತ್‌ದ್ದಾಗಿರುತ್ತದೆ. ಆದ್ದರಿಂದ ಈ ಮೂರು ಧ್ವಜ ಸ್ತಂಭಗಳು ಕ್ರಮಬದ್ಧವಾಗಿ ನಿರ್ಮಾಣವಾಗಬೇಕು ಎಂದರು.
ಧ್ವಜಾರೋಹಣದ ಮೊದಲ ದಿನ ರಾಷ್ಟ್ರ ಧ್ವಜವನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮರುದಿನ ಕನ್ನಡ ಸಾಹಿತ್ಯ ಪರಿಷತ್ ಧ್ವಜವನ್ನು ಕಸಾಪ ಅಧ್ಯಕ್ಷರು ಧ್ವಜಾರೋಹಣ ನೆರವೇರಿಸಲಿದ್ದಾರೆ. ನಾಡ ಧ್ವಜವನ್ನು ಜಿಲ್ಲೆಯ ಸಾಹಿತಿ ಹಾಗೂ ಪ್ರಗತಿ ಪರ ರೈತರು, ಸ್ವಾತಂತ್ರ್ಯ ಹೋರಾಟಗಾರರು ಮತ್ತು ಮಾಜಿ ಸೈನಿಕರಿಂದ ನೆರವೇರಿಸುವ ಕುರಿತು ಸಮಾಲೋಚಿಸಲಾಗುವುದು. ಧ್ವಜ ಸಮಿತಿಯವರಿಗೆ ಪ್ರತ್ಯೇಕ ಐಡಿ ಕಾರ್ಡ್ ನೀಡುವುದರ ಜತೆಗೆ ಸಾಹಿತ್ಯ ಸಮ್ಮೇಳನದ ಲೋಗೋ ಇರುವ ಕ್ಯಾಪ್ ನೀಡಲಾಗುವುದು. ಅಂತೆಯೇ ಸ್ಮರಣಿಕೆ ಹಾಗೂ ಪ್ರಮಾಣ ಪತ್ರ ನೀಡುವುದನ್ನು ಮುಂದಿನ ದಿನಗಳಲ್ಲಿ ತೀರ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎನ್.ಲಿಂಗರಾಜು, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ಜ್ಞಾನಪೂರ್ಣ, ಶ್ರೀರಂಗಪಟ್ಟಣ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎ.ಸೋಮಶೇಖರ, ಸಾತನೂರು ವೇಣುಗೋಪಾಲ್, ಬಿ.ಕೆ.ಸತೀಶ್ ಇತರರಿದ್ದರು.