ಘನತ್ಯಾಜ್ಯ ಸೇವಾ ಶುಲ್ಕಕ್ಕೆ ಎಫ್​​​​​ಕೆಸಿಸಿಐ ಅಸಮಾಧಾನ

fkcci
Published on

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣ ಬಳಕೆದಾರರ/ ಸೇವಾ ಶುಲ್ಕ (ಎಸ್​ಡಬ್ಲ್ಯುಎಂ ಯೂಸರ್​ ಫೀಸ್​) ವಿಧಿಸಿರುವುದಕ್ಕೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್​​​ಕೆಸಿಸಿಐ) ಅಸಮಾಧಾನ ವ್ಯಕ್ತಪಡಿಸಿದೆ.

ವಸತಿ ಆಸ್ತಿಗಳಿಗೆ, ನಿರ್ಮಾಣ ಪ್ರದೇಶದ ಆಧಾರದ ಮೇಲೆ ಮಾಸಿಕ 10 ರೂ. ನಿಂದ 400 ರೂ. ವರೆಗೆ ಶುಲ್ಕ ವಿಧಿಸಲಾಗುತ್ತದೆ. ವಾಣಿಜ್ಯ ಸಂಸ್ಥೆಗಳು ಉತ್ಪತ್ತಿಯಾಗುವ ಪ್ರತಿ ಕಿಲೋಗ್ರಾಂ ತ್ಯಾಜ್ಯಕ್ಕೆ 12 ರೂ. ನಿಗದಿಪಡಿಸಲಾಗಿದೆ. ವಾರ್ಷಿಕ ಶುಲ್ಕವನ್ನು ಶೇ.5 ಹೆಚ್ಚಳ ಮಾಡಲಾಗಿದೆ. ಉದ್ಯಮ ಮತ್ತು ವ್ಯಾಪಾರ ವಲಯಗಳು ಸುಸ್ಥಿರ, ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆ ಅಗತ್ಯ ಅರ್ಥ ಮಾಡಿಕೊಂಡಿವೆ. ಪ್ರಸ್ತುತ ಶುಲ್ಕ ರಚನೆಯು ವಾಣಿಜ್ಯ ತ್ಯಾಜ್ಯಕ್ಕೆ ಪ್ರತಿ ಕೆ.ಜಿ.ಗೆ 12 ರೂ. ಸ್ಥಿರ ದರವು ವ್ಯಾಪಾರ ಕಾರ್ಯಾಚರಣೆ ಮತ್ತು ತ್ಯಾಜ್ಯ ಉತ್ಪಾದನೆ ಮಟ್ಟಗಳಲ್ಲಿನ ವೈವಿಧ್ಯತೆ ಗಣನೆಗೆ ತೆಗೆದುಕೊಂಡಿಲ್ಲ ಎಂದು ಎಫ್​ಕೆಸಿಸಿಐ ಅಧ್ಯ ಎಂ.ಜಿ. ಬಾಲಕೃಷ್ಣ ಬೇಸರ ವ್ಯಕ್ತಪಡಿಸಿದ್ದಾರೆ.

ಸಂಗ್ರಹಿಸಿದ ಶುಲ್ಕಗಳು ತ್ಯಾಜ್ಯ ನಿರ್ವಹಣಾ ಮೂಲಸೌಕರ್ಯ ಮತ್ತು ಸೇವೆ ಹೇಗೆ ನಿರ್ವಹಿಸುತ್ತದೆ ಎಂಬುದರ ಕುರಿತು ಬಿಬಿಎಂಪಿ ಸ್ಪಷ್ಟವಾಗಿ ತಿಳಿಸಬೇಕು. ವ್ಯವಹಾರಗಳ ಸ್ವರೂಪ, ಪ್ರಮಾಣವನ್ನು ಪ್ರತಿಬಿಂಬಿಸುವ ಶ್ರೇಣಿಕೃತ ಶುಲ್ಕ ವ್ಯವಸ್ಥೆ ಪರಿಗಣಿಸಬೇಕು. ರಿಯಾಯಿತಿ ಅಥವಾ ಕಡಿಮೆ ಶುಲ್ಕಗಳ ಮೂಲಕ ಸ್ಥಳದಲ್ಲೆ ತ್ಯಾಜ್ಯ ಸಂಸ್ಕರಣೆಯನ್ನು ಅಳವಡಿಸಿಕೊಳ್ಳುವ ವ್ಯವಹಾರಗಳಿಗೆ ಪ್ರೋತ್ಸಾಹ ನೀಡಬೇಕು. ಪರಿಣಾಮಕಾರಿ ತ್ಯಾಜ್ಯ ನಿರ್ವಹಣಾ ತಂತ್ರ ಅಭಿವೃದ್ಧಿಪಡಿಸಲು ಉದ್ಯಮ ಪ್ರತಿನಿಧಿಗಳೊಂದಿಗೆ ನಿಯಮಿತವಾಗಿ ಸಮಾಲೋಚಿಸಬೇಕು. ಕೈಗಾರಿಕೆ ಮತ್ತು ವ್ಯಾಪಾರದ ಮೇಲೆ ಅನಗತ್ಯ ಹೊರೆ ಹೇರದೆ ಪರಿಸರ ಸಂರಣೆ ಖಚಿತಪಡಿಸಿಕೊಳ್ಳಬೇಕು ಎಂದು ಬಾಲಕೃಷ್ಣ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net