

ಮಡಿಕೇರಿ:
ಮಿನಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕುಶಾಲನಗರ ಸಮೀಪದ ಚಿಕ್ಕ ಅಳುವಾರದಲ್ಲಿ ಜಾಗ ಗುರುತಿಸಿದ್ದರೂ ಅದು ಸೂಕ್ತವಲ್ಲ ಎಂದು ವರದಿ ಬಂದಿರುವುದರಿAದ ಮಡಿಕೇರಿ ಸಮೀಪ ಕನಿಷ್ಠ 120 ಎಕರೆ ಸಮತಟ್ಟು ಪ್ರದೇಶ ಲಭ್ಯವಾದಲ್ಲಿ ಅದನ್ನು ಖರೀದಿಸಿ ವಿಮಾನ ನಿಲ್ದಾಣ ಸ್ಥಾಪನೆಗೆ ಸರ್ಕಾರ ಸಿದ್ಧವಿರುವುದಾಗಿ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ವಾಣಿಜ್ಯ ಮಹಾ ಸಂಸ್ಥೆ ವತಿಯಿಂದ ಇಲ್ಲಿ ಭಾನುವಾರ ಏರ್ಪಡಿಸಿದ್ದ ಸಂವಾದ ಮತ್ತು ಕೊಡಗು ಜಿಲ್ಲೆಯ ಪ್ರವಾಸೋದ್ಯಮ ಹಾಗೂ ಇತರ ಅಭಿವೃದ್ಧಿ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಒಂದೇ ಕಡೆಯಲ್ಲಿ ಕನಿಷ್ಠ 120 ಎಕರೆ ಸಮತಟ್ಟು ಜಾಗ ಖಾಸಗಿ ವ್ಯಕ್ತಿಗಳಿಂದ ಲಭ್ಯವಿದ್ದರೆ ಅದನ್ನು ಮಾರುಕಟ್ಟೆ ದರದಲ್ಲಿ ಖರೀದಿಸಲು ಸರ್ಕಾರ ಒಪ್ಪಿಗೆ ನೀಡಿದೆ. ಜಿಲ್ಲೆಯಲ್ಲಿ ನಾಲ್ಕು ಕಡೆ ಹೆಲಿಪೋರ್ಟ್ ಸ್ಥಾಪನೆಗೂ ಸರ್ಕಾರ ಮುಂದಾಗಿದೆ. ಮೈಸೂರಿನಿಂದ ಕುಶಾಲನಗರವರೆಗಿನ ರೈಲ್ವೆ ಸಂಪರ್ಕ ಯೋಜನೆಗೆ ರಾಜ್ಯ ಸರ್ಕಾರ ಆದಾಯದ ದೃಷ್ಟಿಯಿಂದ ಒಪ್ಪಿಗೆ ನೀಡದಿದ್ದರೂ, ಕೇಂದ್ರ ರೈಲ್ವೆ ಸಚಿವ ಸೋಮಣ್ಣ ಈ ಸಂಬAಧ ರಾಜ್ಯ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದು ಸರ್ಕಾರವನ್ನು ಮನವೊಲಿಸಲಾಗುವುದು.
ಮಡಿಕೇರಿಯಿಂದ ಕೊಡ್ಲಿಪೇಟೆ ಮೂಲಕ ದೋಣಿಗಲ್‌ಗೆ ರಸ್ತೆ ಅಗಲೀಕರಣಕ್ಕಾಗಿ 700 ರಿಂದ 800 ಕೋಟಿ ರೂ. ವೆಚ್ಚ ಮಾಡಲಾಗುವುದು. ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಹೃದಯ ಚಿಕಿತ್ಸೆ ವಿಭಾಗಕ್ಕೆ 10.56 ಕೋಟಿ ರೂ. ವೆಚ್ಚದಲ್ಲಿ ಉಪಕರಣ ಖರೀದಿಸಲಿದ್ದು, ಜಿಲ್ಲೆಯಲ್ಲಿ ಎಲ್ಲಾ ಹೃದಯ ರೋಗಿಗಳಿಗೆ ಸುಲಭದಲ್ಲಿ ಚಿಕಿತ್ಸೆ ಲಭ್ಯವಾಗುವ ರೀತಿ ಯೋಜನೆ ರೂಪಿಸಲಾಗಿದೆ. ಹದಗೆಟ್ಟ ರಸ್ತೆಗಳನ್ನು ರಿಪೇರಿ ಮಾಡಲು 50 ಕೋಟಿ ರೂ. ಮೀಸಲಿದ್ದು ಮಳೆಯಿಂದಾಗಿ ವಿಳಂಬವಾಗುತ್ತಿದೆ.
ಜಿಲ್ಲೆಯಲ್ಲಿ ಹಲವು ಹೋಂಸ್ಟೇಗಳು ಕಾನೂನಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದು ಇದರಿಂದ ಪ್ರವಾಸಿಗರಿಗೂ ತೊಂದರೆ ಉಂಟಾಗುತ್ತಿದೆ. ಹಾಗಾಗಿ ಪ್ರವಾಸೋದ್ಯಮಕ್ಕೆ ಕಟ್ಟು ನಿಟ್ಟಿನ ನಿಯಮ ಜಾರಿ ಅಗತ್ಯ ಎಂದು ಹೇಳಿದರು.
ಇದಕ್ಕೂ ಮೊದಲು ಪ್ರಾಸ್ತಾವಿಕವಾಗಿ ಮಾತನಾಡಿದ ಎಫ್‌ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ, ತಮ್ಮ ಅಧಿಕಾರಾವಧಿಯಲ್ಲಿ ಮಂತನ್ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸುಮಾರು 2500 ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಯೋಜನೆ ಇದೆ. ಕರ್ನಾಟಕದಲ್ಲಿ ಸುಮಾರು 7 ಲಕ್ಷ ಎಂ ಎಸ್ ಎಂ ಇ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು ಇದನ್ನು 10 ಲಕ್ಷಕ್ಕೆ ಏರಿಸುವ ಬಗ್ಗೆ ಸಂಸ್ಥೆ ಯೋಜನೆ ಹಮ್ಮಿಕೊಂಡಿದೆ. ಎಲ್ಲ ಉದ್ಯಮಿಗಳು ಬೆಂಗಳೂರನ್ನೇ ಅವಲಂಬಿಸಿಕೊAಡಿದ್ದು ಬಿಯಾಂಡ್ ಬೆಂಗಳೂರು ಎಂಬ ಬ್ಯಾನರ್ ಅಡಿ ಇಡೀ ರಾಜ್ಯದಲ್ಲಿ ಬೇರೆ ಬೇರೆ ಉದ್ಯಮಗಳನ್ನು ಸ್ಥಾಪಿಸುವ ಬಗ್ಗೆ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ತಿಳಿಸಿದರು.
ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಪರವಾಗಿ ಮಾತನಾಡಿದ ಸಂಸ್ಥೆಯ ಮಾಜಿ ಅಧ್ಯಕ್ಷ ಜಿ. ಚಿದ್ವಿಲಾಸ್, ಕಳೆದ ಆರು ತಿಂಗಳುಗಳಿAದ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದ್ದು ರಸ್ತೆಗಳು ತೀವ್ರ ಹದಗೆಟ್ಟಿದೆ. ಅವುಗಳನ್ನು ಸರಿಪಡಿಸಲು ರಾಜ್ಯ ಸರ್ಕಾರ ವಿಶೇಷ ಅನುದಾನ ನೀಡುವ ನಿಟ್ಟಿನಲ್ಲಿ ಎಫ್‌ಕೆಸಿಸಿಐ ರಾಜ್ಯ ಸರ್ಕಾರವನ್ನು ಒತ್ತಾಯಿಸಬೇಕು. ಮೈಸೂರು ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ಕೆಲಸ ಕುಂಟಿತಗೊAಡಿದ್ದು ಈ ಬಗ್ಗೆ ಶೀಘ್ರ ಕಾಮಗಾರಿ ಕೈಗೊಂಡು ಅದನ್ನು ಮುಕ್ತಾಯಗೊಳಿಸುವ ನಿಟ್ಟಿನಲ್ಲಿ ಸಂಬAಧಿತ ಇಲಾಖೆಯವರನ್ನು ಸಂಸ್ಥೆ ಸಂಪರ್ಕಿಸಬೇಕು.
ಪರಿಸರ ಸ್ನೇಹಿ ಹಾಗೂ ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿಗೆ ದೇಶದ ವಿವಿಧೆಡೆ ಕೊಡಗಿನ ಪ್ರವಾಸೋದ್ಯಮ ಕುರಿತು ಪ್ರಚಾರದ ಅಗತ್ಯತೆ ಇದೆ. ದಶಕಗಳಿಂದ ಕೊಡಗು ಜಿಲ್ಲೆ, ಲೋಕಸಭಾ ಕ್ಷೇತ್ರಕ್ಕಾಗಿ ದಕ್ಷಿಣ ಕನ್ನಡ ಹಾಗೂ ಇದೀಗ ಮೈಸೂರು ಜಿಲ್ಲೆಯನ್ನು ಅವಲಂಬಿಸಿದ್ದು ಮುಂದಿನ ಲೋಕಸಭಾ ಚುನಾವಣಾ ಹಂತದಲ್ಲಿ ಪ್ರತ್ಯೇಕ ಲೋಕಸಭಾ ಕ್ಷೇತ್ರ ಆಗುವಂತೆ ಸರ್ಕಾರ ಗಮನಹರಿಸಬೇಕು. ಜಿಲ್ಲೆಯಲ್ಲಿ ಪರಿಸರಕ್ಕೆ ಮಾರಕವಾಗುವ ಕೈಗಾರಿಕೆಗಳ ಅಗತ್ಯ ಇಲ್ಲದಿದ್ದು ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಐಟಿಬಿಟಿ ಸಂಸ್ಥೆಗಳನ್ನು ಜಿಲ್ಲೆಯಲ್ಲಿ ಸ್ಥಾಪಿಸುವಂತೆ ಆಗಬೇಕು ಎಂದು ಹೇಳಿದರು.
ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಕೆ. ವಿಶ್ವನಾಥ್ ಮಾತನಾಡಿ, ಕುಶಾಲನಗರದಿಂದ ಮಂಗಳೂರು ನವ ಬಂದರಿಗೆ ರಸ್ತೆ ಮೂಲಕ ಮಳೆಗಾಲದಲ್ಲಿ ಕಾಫಿ ಸಾಗಾಟ ಮಾಡಲು ಅವಕಾಶ ಇರುವುದಿಲ್ಲ. ಇದರಿಂದ ಸಾಗಾಟದ ವೆಚ್ಚ ಹೆಚ್ಚಾಗಿ ಅದು ಬೆಳೆಗಾರನ ಮೇಲೆ ಹೊರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ನಿರಂತರ ಲಾರಿ ಸಾಗಾಟಕ್ಕೆ ಸೂಕ್ತವಾಗುವ ರಸ್ತೆ ನಿರ್ಮಾಣ ಮಾಡುವಂತೆ ಎಫ್ ಕೆ ಸಿ ಸಿ ಐ ಒತ್ತಾಯ ಮಾಡಬೇಕು ಎಂದರು.
ಅದೇ ಸಂಸ್ಥೆಯ ಮತ್ತೊಬ್ಬ ಕಾರ್ಯಕಾರಿ ಮಂಡಳಿ ಸದಸ್ಯ ಪ್ರದೀಪ್ ಪೂವಯ್ಯ ಮಾತನಾಡಿ, ದೇಶದ ಬೇರೆ ಬೇರೆ ಪ್ರದೇಶಗಳಲ್ಲಿ ಕಾಫಿ ಬೆಳೆಯಲಾಗುತ್ತಾದರೂ ಶೇಕಡಾ 70ರಷ್ಟು ಕುಶಾಲನಗರದಿಂದಲೇ ರಫ್ತಾಗುತ್ತಿದ್ದು ಸೂಕ್ತ ರಸ್ತೆಯ ಅವಶ್ಯಕತೆ ಇದೆ. ನವ ಮಂಗಳೂರು ಬಂದರಿಗೆ ಎಲ್ಲೆಡೆಯಿಂದ ಸುಗಮ ರಸ್ತೆ ಸಂಪರ್ಕ ಆಗಬೇಕಾಗಿದೆ ಎಂದು ಹೇಳಿದರು.
ಸಿಪಿಎ ಅಧ್ಯಕ್ಷ ನಂದ ಬೆಳ್ಳಿಯಪ್ಪ ಮಾತನಾಡಿ ಕೊಡಗಿಗೆ ಪರಿಸರ ಪೂರಕವಾದ ಐಟಿ ಬಿಟಿ ಸಂಸ್ಥೆಗಳು ತಮ್ಮ ಉದ್ಯಮವನ್ನು ಆರಂಭಿಸುವುದು ಒಳಿತು. ಉತ್ತಮ ರಸ್ತೆಗಳು ನಿರ್ಮಾಣವಾದರೂ ಎರಡೂ ಬದಿಗಳಲ್ಲಿ ವೈಜ್ಞಾನಿಕ ಚರಂಡಿಗಳು ಇಲ್ಲದ್ದರಿಂದ ರಸ್ತೆ ಬೇಗ ಹಾಳಾಗುತ್ತದೆ ಎಂದರು.
ಎಫ್‌ಕೆಸಿಸಿಐ ಹಿರಿಯ ಉಪಾಧ್ಯಕ್ಷ ಸಾಯಿರಾಮ್ ಪ್ರಸಾದ್, ಕಾರ್ಯದರ್ಶಿ ಪ್ರಕಾಶ್, ಎಫ್‌ಕೆಸಿಸಿಐ ನಿಕಟ ಪೂರ್ವ ಅಧ್ಯಕ್ಷ ಎಂ. ಜಿ. ಬಾಲಕೃಷ್ಣ, ನಿರ್ದೇಶಕ ಕೆ.ಬಿ. ಗಿರೀಶ್ ಗಣಪತಿ, ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಪ್ರಧಾನ ಕಾರ್ಯದರ್ಶಿ ಮೋಂತಿ ಗಣೇಶ್, ರಾಜ್ಯ ನಿರ್ದೇಶಕ ಹಿರೇಮಠ್ ಇದ್ದರು.
ಜಿಲ್ಲಾ ಚೇಂಬರ್ ವತಿಯಿಂದ ರಾಜ್ಯಾಧ್ಯಕ್ಷೆ ಉಮಾ ರೆಡ್ಡಿ, ಹಿರಿಯ ಉಪಾಧ್ಯಕ್ಷ ಸಾಯಿ ರಾಮ್ ಪ್ರಸಾದ್, ಹಿಂದಿನ ಅಧ್ಯಕ್ಷ ಎಂ.ಜಿ. ಬಾಲಕೃಷ್ಣ ಇವರುಗಳನ್ನು ಸನ್ಮಾನಿಸಲಾಯಿತು. ರಾಜ್ಯ ಸಂಸ್ಥೆ ವತಿಯಿಂದ ಶಾಸಕ ಡಾ. ಮಂತರ್ ಗೌಡ ಅವರನ್ನು ಗೌರವಿಸಲಾಯಿತು. ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷ ಅಂಬೆಕಲ್ ನವೀನ್ ಗೌರವ ಸ್ವೀಕರಿಸಿದರು.