ರಾಗಿ ಕಟಾವು ಯಂತ್ರಕ್ಕೆ ಬಾಡಿಗೆ ದರ ನಿಗದಿ

millet harvesting machine
millet harvesting machine
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಪ್ರತಿ ವರ್ಷದಂತೆ ಈ ಬಾರಿಯೂ ರಾಗಿ ಬೆಳೆಗಾರರ ನೆರವಿಗೆ ಮುಂದಾಗಿರುವ ಜಿಲ್ಲಾಡಳಿತ ರಾಗಿ ಕಟಾವು ಯಂತ್ರಕ್ಕೆ ಬಾಡಿಗೆ ದರ ನಿಗದಿಪಡಿಸಿ ಆದೇಶ ಹೊರಡಿಸಿದೆ.
ರಾಗಿ ಕಟಾವು ಮಾಡುವ ಖಾಸಗಿ ಯಂತ್ರಗಳ ಮಾಲೀಕರು ರೈತರಿಂದ ಹೆಚ್ಚುವರಿ ಹಣ ಸುಲಿಗೆ ಮಾಡುವ ದೂರುಗಳು ಈ ಹಿಂದಿನಿಂದಲೂ ಕೇಳಿಬರುತ್ತಿವೆ. ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ರೈತರು ಖಾಸಗಿಯವರು ಕೇಳಿದಷ್ಟು ಹಣ ನೀಡಿ ಕಟಾವಿಗೆ ಮುಂದಾಗುವುದು ಸಾಮಾನ್ಯ. ಅದರಲ್ಲೂ ಈ ಬಾರಿ ತೀವ್ರ ಮಳೆ ಕೊರತೆಯಿಂದ ಭಾರಿ ನಷ್ಟ ಅನುಭವಿಸಿರುವ ರೈತರು ಅಳಿದುಳಿದ ಸಲು ಉಳಿಸಿಕೊಳ್ಳುವುದೇ ಸವಾಲಿನ ಕೆಲಸವಾಗಿದೆ. ಸಲಿಗೆ ಹಾಕಿದ ಬಂಡವಾಳವೂ ವಾಪಸ್ ಆಗದ ಪರಿಸ್ಥಿತಿಯಲ್ಲಿ ದುಬಾರಿ ದರ ಕೊಟ್ಟು ಕೊಯ್ಲು ಮಾಡಿಸುವುದು ದುಸ್ತರವಾಗಿದೆ. ಇದನ್ನು ಮನಗಂಡ ಜಿಲ್ಲಾಡಳಿತ ದರ ನಿಗದಿ ಮಾಡಿದೆ.
ರೈತರಿಂದ ಜಿಲ್ಲಾಧಿಕಾರಿಗೆ ದೂರು:
ಜಿಲ್ಲೆಯಲ್ಲಿ 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 56,513 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆದಿದ್ದು, ಬಹುತೇಕ ರಾಗಿ ಬೆಳೆ ಕಟಾವು ಹಂತದಲ್ಲಿದೆ. ಕೆಲವೆಡೆ ಕಾಳು ಕಟ್ಟುವ ಹಂತದಲ್ಲಿದೆ. ಜಿಲ್ಲೆಯ ಬಹುತೇಕ ರೈತರು ಕಟಾವು ಯಂತ್ರಗಳ ಮೂಲಕ ಕಟಾವು ಕಾರ್ಯ ಕೈಗೊಳ್ಳುತ್ತಿದ್ದಾರೆ. ಖಾಸಗಿ ರಾಗಿ ಕಟಾವು ಯಂತ್ರಗಳ ಮಾಲೀಕರು ರೈತರಿಂದ ಪ್ರತಿ ಗಂಟೆಗೆ 3500 ರೂಪಾಯಿಯಿಂದ 4 ಸಾವಿರ ರೂಪಾಯಿವರೆಗೆ ಬಾಡಿಗೆ ಹಣ ನಿಗದಿಪಡಿಸಿರುವ ಬಗ್ಗೆ ದೇವನಹಳ್ಳಿ, ದೊಡ್ಡಬಳ್ಳಾಪುರ ತಾಲೂಕಿನ ಹಲವು ಗ್ರಾಮಗಳ ರೈತರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಅಧಿಕಾರಿಗಳ ಸಭೆ ನಡೆಸಿರುವ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ದರ ನಿಗದಿ ಆದೇಶ ಹೊರಡಿದ್ದಾರೆ.
ಜಿಲ್ಲಾ ಸಮನ್ವಯ ಸಮಿತಿ ಸಭೆಯಲ್ಲಿ ತೀರ್ಮಾನ:

ಪ್ರಸ್ತುತ ಸಾಲಿನಲ್ಲಿ ಮಳೆ ಕೊರತೆಯುಂಟಾಗಿ ಬೆಳೆ ಹಾನಿಯಾಗಿರುವುದರಿಂದ ರೈತರಿಗೆ ತೀವ್ರ ಆರ್ಥಿಕ ಹೊರೆಯಾಗಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಸಮನ್ವಯ ಸಮಿತಿ ಸಭೆಯಲ್ಲಿ ಗ್ರಾಮಾಂತರ ಜಿಲ್ಲೆಯ ಜಿಪಂ ಸಿಇಒ ಡಾ.ಕೆ.ಎನ್.ಅನುರಾಧಾ ಅಧ್ಯಕ್ಷತೆಯಲ್ಲಿ ಕೃಷಿ ಯಂತ್ರಧಾರೆ (ಬಾಡಿಗೆ ಆಧಾರಿತ ಸೇವಾ ಕೇಂದ್ರ)ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ರಾಗಿ ಕಟಾವು ಯಂತ್ರಕ್ಕೆ ಬಾಡಿಗೆ ದರ ನಿಗದಿಪಡಿಸಲಾಗಿದೆ. ಇಂಧನ ವೆಚ್ಚ, ಕಾರ್ಮಿಕರ ಕೂಲಿ ಹಾಗೂ ನಿರ್ವಹಣೆ ವೆಚ್ಚ ಪರಿಗಣಿಸಿ ರಾಗಿ ಕಟಾವು ಮಾಡಲು ಪ್ರತಿ ಗಂಟೆಗೆ ದೊಡ್ಡ ಯಂತ್ರಕ್ಕೆ 3,350 ರೂಪಾಯಿ ಹಾಗೂ ಸಣ್ಣ ಯಂತ್ರಕ್ಕೆ 2700 ರೂಪಾಯಿ ಬಾಡಿಗೆ ನಿಗದಿಪಡಿಸಲಾಗಿದೆ. ಅದರಂತೆ ಜಿಲ್ಲೆಯಲ್ಲಿ ರಾಗಿ ಬೆಳೆ ಕಟಾವು ಮಾಡುತ್ತಿರುವ ದೊಡ್ಡ ಕಟಾವು ಯಂತ್ರಕ್ಕೆ ನಿಗದಿಪಡಿಸಿರುವ ದರ ಮೀರದಂತೆ ಪ್ರತಿ ಗಂಟೆಗೆ ಬಾಡಿಗೆ ನಿಗದಿಪಡಿಸಿದೆ. ತಪ್ಪಿದಲ್ಲಿ ರಾಗಿ ಕಟಾವು ಯಂತ್ರದ ಮಾಲೀಕರ ವಿರುದ್ಧ ವಿಪತ್ತು ನಿರ್ವಹಣೆ ಕಾಯ್ದೆ 2005ರ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.


ಪ್ರತಿ ವರ್ಷ ರಾಗಿ ಕಟಾವು ಯಂತ್ರದ ಮಾಲೀಕರು ದುಬಾರಿ ದರ ಕೇಳುವ ದೂರು ಕೇಳಿಬರುತ್ತದೆ. ಅದೇ ರೀತಿ ಈ ಬಾರಿ ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ಭಾಗದ ರೈತರು ದರ ಹೆಚ್ಚಳ ಬಗ್ಗೆ ದೂರು ನೀಡಿದ್ದರು. ಇದನ್ನು ಪರಿಗಣಿಸಿ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ದರ ನಿಗಧಿ ಮಾಡಿ ಆದೇಶ ಹೊರಡಿಸಲಾಗಿದೆ. ರಾಗಿ ಕಟಾವು ಯಂತ್ರದ ಮಾಲೀಕರು ನಿಯಮ ಉಲ್ಲಂಸಿದ ದೂರು ಕೇಳಿಬಂದರೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಡಾ.ಎನ್.ಶಿವಶಂಕರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net