ರೇಟ್ ಫಿಕ್ಸ್ ಮಾಡಿ, ಬೋರ್ಡ್ ಹಾಕ್ಬಿಡಿ!

1
ದೊಡ್ಡಬಳ್ಳಾಪುರದ ಆಡಳಿತ ಸೌಧಕ್ಕೆ ಗುರುವಾರ ದಿಢೀರ್ ಭೇಟಿ ಕೊಟ್ಟ ಸಚಿವ ಕೃಷ್ಣಬೈರೇಗೌಡ ಅವರು, ತಹಸೀಲ್ದಾರ್ ವಿಭಾವಿದ್ಯಾ ರಾಠೋಡ್, ಉಪವಿಭಾಗಾಧಿಕಾರಿ ದುರ್ಗಾಶ್ರೀ ಅವರಿಂದ ಮಾಹಿತಿ ಪಡೆದರು.
Published on

ಚೌಕಾಸಿ ಮಾಡೋದು ತಪ್ಪುತ್ತೆ - ಅವ್ಯವಸ್ಥೆ ಕಂಡು ಕಂದಾಯ ಸಚಿವ ಕೃಷ್ಣಬೈರೇಗೌಡ ತರಾಟೆ

ದೊಡ್ಡಬಳ್ಳಾಪುರ: ಆಫೀಸ್‌ಗೆ ಬರೋದಕ್ಕೆ ನಿಮ್ಗೆ ಹೊತ್ತು ಗೊತ್ತು ಏನ್ ಇಲ್ವಾ.... ಜನ ಬಂದು ನಿಮ್ಗೆ ಕಾಯ್ತ ಇರಬೇಕಾ... ಆಮೇಲೆ ನೀವು ಬರೋದು ಅಲ್ವಾ... ದಾರಿಯಲ್ಲಿ ಹೋಗೋ ದಾಸಯ್ಯನಿಗೆ ಹೇಳೋ ರೀತಿ ಉತ್ತರ ಕೊಡ್ಬೇಡಿ...

ಇದು ಯಾವುದೋ ಸಿನಿಮಾ ಡೈಲಾಗ್ ಅಲ್ಲ. ಬದಲಾಗಿ ಗುರುವಾರ ಬೆಳಗ್ಗೆ ಕಂದಾಯ ಸಚಿವ ಕೃಷ್ಣಭೈರೇಗೌಡ ಉಪವಿಭಾಗಾಧಿಕಾರಿ ಕಚೇರಿ, ತಾಲೂಕು ಕಚೇರಿ, ಸಬ್ ರಿಜಿಸ್ಟ್ರರ್ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿದಾಗ ಉಪವಿಭಾಗಾಧಿಕಾರಿ ದುರ್ಗಾಶ್ರೀ ಮತ್ತು ತಹಸೀಲ್ದಾರ್ ವಿಭಾವಿದ್ಯಾ ರಾಠೋಡ್ ಅವರನ್ನು ತರಾಟೆಗೆ ತೆಗೆದುಕೊಂಡ ಪರಿ.

‘ರೆಕಾರ್ಡ್ ರೂಂ ಓಪನ್ ಮಾಡೇ ಇಲ್ಲ, ಸ್ಕ್ಯಾನಿಂಗ್ ಎಲ್ಲಿಂದ ಮಾಡುತ್ತೀರಾ.. ನಿಮ್ಮಷ್ಟು ಬುದ್ಧಿವಂತ ನಾನಲ್ಲ. ಬಾಯಿ ಇದೆ ಅಂತಾ ಏನೇನ್ ಮಾತಾಡ್ತೀರಾ... ಎಸಿ ಆಫೀಸ್ ಚೇತನ್ ಯಾರು..? ಅವರನ್ನು ಹುಡುಕ್ಕೊಂಡು ಬಂದಿದ್ದೀನಿ ನಾನು... ಅವರ ದರ್ಶನ ಮಾಡಬೇಕು.. ಯಾವ ಕೆಲಸಕ್ಕೆ ಎಷ್ಟು ಅಂತಾ ಬೋರ್ಡ್ ಹಾಕಿ, ಅಧಿಕೃತ ಮಾಡ್ಬಿಡಿ... ಚೌಕಾಸಿ ಮಾಡೋದು ತಪ್ಪುತ್ತೆ. ಯಾರಿಗೆ ಎಷ್ಟು ಭಾಗ? ಇಷ್ಟು ಪಸೆರ್ಂಟ್ ಮಂತ್ರಿಗೆ ಹೋಗುತ್ತೆ ಅಂತಾ ಬೋರ್ಡ್ ಹಾಕ್ಬಿಡಿ’ ಎಂದು ಗರಂ ಆದರು.

ಅಧಿಕಾರಿಗಳೇ ಇಲ್ಲ: ಬೆಳಗ್ಗೆ 10ಕ್ಕೆ ಸರಿಯಾಗಿ ಕಚೇರಿಗೆ ಒಬ್ಬಂಟಿಯಾಗಿ ಆಗಮಿಸಿದ ಸಚಿವ ಕೃಷ್ಣಬೈರೇಗೌಡ ಅವರು ಉಪವಿಭಾಗಾಧಿಕಾರಿ ಕಚೇರಿ, ಸಬ್ ರಿಜಿಸ್ಟರ್, ಆರ್‌ಆರ್‌ಟಿ, ತಹಸೀಲ್ದಾರ್ ಮತ್ತು ಎಲ್ಲ ಸೆಕ್ಷನ್‌ಗಳಿಗೆ ಭೇಟಿ ನೀಡಿದರು. ಈ ವೇಳೆ ನಾಲ್ಕೈದು ಮಂದಿ ಹೊರಗುತ್ತಿಗೆ ಕೆಲಸಗಾರರನ್ನು ಬಿಟ್ಟರೆ ಯಾವೊಬ್ಬ ಅಧಿಕಾರಿಯೂ ಚೇಂಬರ್‌ನಲ್ಲಿ ಇರಲಿಲ್ಲ. ಸಚಿವರ ಭೇಟಿ ವಿಷಯ ತಿಳಿದ ಬಳಿಕ ತಹಸೀಲ್ದಾರ್, ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿ ಸ್ಥಳಕ್ಕೆ ದೌಡಾಯಿಸಿದರು.

ಸಾರ್ವಜನಿಕರ ಎದುರೇ ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದ ಸಚಿವರು, ಜನರ ಕೆಲಸಗಳಿಗೆ ಸ್ಪಂದಿಸುವಂತೆ ಸೂಚನೆ ನೀಡಿದರು.

ಭೂಸುರಕ್ಷಾ ಆ್ಯಪ್ ಶೀಘ್ರ

ಸಬ್ ರಿಜಿಸ್ಟ್ರರ್ ಕಚೇರಿಯಲ್ಲಿ ಮಧ್ಯವರ್ತಿಗಳು ಅಧಿಕಾರಿಗಳ ಹೆಸರಲ್ಲಿ ಜನರ ಸುಲಿಗೆ ಮಾಡುತ್ತಿದ್ದಾರೆ. ಬೋಗಸ್ ದಾಖಲೆ ಸೃಷ್ಟಿಸಿ ರಿಜಿಸ್ಟ್ರೇಷನ್ ಮಾಡ್ತಿದ್ದಾರೆ. ಹೀಗಾಗಿ ಮಧ್ಯವರ್ತಿಗಳ ಕೈಗೆ ಆಸ್ಪದ ನೀಡದ ರೀತಿಯಲ್ಲಿ ನಾವು ಕೆಲಸ ಮಾಡಬೇಕಿದೆ. ರೆಕಾರ್ಡ್ ರೂಮ್‌ನಲ್ಲಿ ದುಡ್ಡು ಕೊಡದೆ ಇದ್ದರೆ ಯಾವುದೇ ದಾಖಲೆ ಕೊಡುವುದಿಲ್ಲ ಎಂದು ಜನ ಮಾತಾಡಿಕೊಳ್ತಿದ್ದಾರೆ ಎಂದು ತರಾಟೆ ತೆಗೆದುಕೊಂಡ ಸಚಿವ ಕೃಷ್ಣಬೈರೇಗೌಡ, ಆ ಕಾರಣದಿಂದ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಆ ದಾಖಲೆಗಳನ್ನು ಆನ್ ಲೈನ್‌ಗೆ ಬಿಡ್ತಾ ಇದ್ದೇವೆ. ಲ್ಯಾಂಡ್ ಗ್ರ್ಯಾಂಟ್, ಒಎಂ, ಸಾಗುವಳಿ ಚೀಟಿ ಇಂತಹ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಹಾಕುವುದರಿಂದ ಜನರೇ ನೋಡಿಕೊಳ್ಳಬಹುದಾಗಿದೆ. ಭೂಸುರಕ್ಷಾ ಆ್ಯಪ್ ಯೋಜನೆಯಡಿ ಜನವರಿ ಮೊದಲ ವಾರದಿಂದ ಕೆಲಸ ಮಾಡಲಾಗುವುದು. ರಾಜ್ಯದ 220 ಸಬ್ ರಿಜಿಸ್ಟ್ರರ್ ಕಚೇರಿಯಲ್ಲಿ ದಾಖಲೆಗಳ ಸ್ಕ್ಯಾನಿಂಗ್ ಕೆಲಸ ಆಗಲಿದೆ. ಇದರಿಂದ ದಾಖಲೆಗಳನ್ನು ತಿದ್ದುವುದು ಸಾಧ್ಯವಾಗದು ಎಂದರು. ಇಲ್ಲಿಯವರೆಗೂ ಸಾಕಷ್ಟು ದಾಖಲೆಗಳನ್ನು ತಿದ್ದಿದ್ದಾರೆ. ಇನ್ನಾದರೂ ದಾಖಲೆ ತಿದ್ದುವ ಕೆಲಸ ಆಗಬಾರದು. ಹಾಗೆಯೇ ದಾಖಲೆಗಳ ಕಳವು ಸಹ ಆಗುವುದಿಲ್ಲ. ದಾಖಲೆಗಳು ಶಾಶ್ವತವಾಗಿ ಉಳಿಯುತ್ತವೆ ಎಂದ ಅವರು, ವ್ಯವಸ್ಥೆಯಲ್ಲಿ ಬದಲಾವಣೆ ತರುವ ಮೂಲಕ ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಕೆಲಸ ಮಾಡುತ್ತಿದ್ದೇವೆ. ಇದೊಂದು ಸವಾಲಾಗಿದೆ. ಒಳ್ಳೆಯ ಅಧಿಕಾರಿಗಳಿದ್ದು ಅವರ ಸಹಕಾರದಿಂದ ಈ ಕೆಲಸ ಮಾಡುತ್ತಿದ್ದೇವೆ ಎಂದರು.

ಸರ್ಕಾರಿ ವ್ಯವಸ್ಥೆಯಲ್ಲಿ ಜನರ ಕೆಲಸಗಳಿಗೆ ಆದ್ಯತೆ ನೀಡಬೇಕು. ಆದರೆ, ಇಲ್ಲಿ ಅದು ಕಾಣುತ್ತಿಲ್ಲ. ಕೆಲವರು ಪ್ರಾಮಾಣಿಕ ಅಧಿಕಾರಿಗಳಿದ್ದಾರೆ. ಆದರೆ, ಕೆಲ ಅಧಿಕಾರಿಗಳು ನಮಗಾಗಿ ಜನರಿದ್ದಾರೆಂದು ಭಾವಿಸಿದ್ದಾರೆ. ವ್ಯವಸ್ಥೆ ಸರಿ ಇಲ್ಲ ಎಂದು ಜಿಲ್ಲಾಧಿಕಾರಿಗೆ ಹೇಳಿದ್ದೇನೆ, ಸರಿ ಮಾಡುವ ಜವಾಬ್ದಾರಿ ಜಿಲ್ಲಾಧಿಕಾರಿಗೆ ಇದೆ. ಆಡಳಿತ ವ್ಯವಸ್ಥೆಯೇ ಹೀಗಿರುವಾಗ ಜಿಲ್ಲಾಧಿಕಾರಿ ಒಬ್ಬರಿಂದ ಇದು ಸಾಧ್ಯವಿಲ್ಲ. ಹಾಗಂತ ನಾವು ನಿಸ್ಸಹಾಯಕರಾಗಿರುವುದಕ್ಕೆ ಸಾಧ್ಯವಿಲ್ಲ. ಜಿಲ್ಲಾಧಿಕಾರಿ ಆಗಾಗ ತಾಲೂಕು ಕಚೇರಿಗಳಿಗೆ ಭೇಟಿ ಕೊಟ್ಟು ಅವ್ಯವಸ್ಥೆ ಸರಿಪಡಿಸಲು ಸೂಚನೆ ಕೊಟ್ಟಿದ್ದೇನೆ. ಇದನ್ನು ನೋಡಿ ಬೇರೆ ಅಧಿಕಾರಿಗಳು ಸರಿ ಮಾಡಿಕೊಳ್ಳುತ್ತಾರೆಂಬ ನಿರೀಕ್ಷೆ ಇದೆ. ನಾವು ಮಾತ್ರ ಗಂಭೀರವಾಗಿ ಕೆಲಸ ಮಾಡ್ತಾ ಇದ್ದೇವೆ. ಈ ಅವ್ಯವಸ್ಥೆ ನೋಡಿದಾಗ ಸರಿ ಮಾಡಬೇಕಾದ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ನಾವು ಎಷ್ಟು ಮಾಡಿದರೂ ಸಾಲದು ಎಂಬುದಕ್ಕೆ ಇಲ್ಲಿನ ವ್ಯವಸ್ಥೆಯೇ ಸಾಕ್ಷಿಯಾಗಿದೆ ಎಂದು ಕೃಷ್ಣಬೈರೇಗೌಡ ಅಸಮಾಧಾನ ಹೊರಹಾಕಿದರು.

ಮುಚ್ಚಿಟ್ಟರೆ ಆತ್ಮವಂಚನೆ ಮಾಡಿದಂತೆ

ನಾನು ಭೇಟಿ ನೀಡಿದ ವೇಳೆ ಶೇ.90 ಅಧಿಕಾರಿಗಳು ಕೆಲಸಕ್ಕೆ ಬಂದಿಲ್ಲ. 11 ಗಂಟೆಯಾದರೂ ಕೆಲವು ಕಚೇರಿಗಳು ಓಪನ್ ಆಗಿಲ್ಲ, ಇಲ್ಲಿ ವ್ಯವಸ್ಥೆ ಅಧ್ವಾನಗೊಂಡಿದೆ. ಇದನ್ನು ಮುಚ್ಚಿಡುವುದರಿಂದ ನಮಗೆ ಶೋಭೆ ತರುವುದಿಲ್ಲ. ಆಡಳಿತ ವ್ಯವಸ್ಥೆಯಲ್ಲಿ ಬೇಜವಾಬ್ದಾರಿ ಎದ್ದು ಕಾಣುತ್ತಿದೆ. ನಾನು ಬೆಂಗಳೂರಿನಿಂದ ಬಂದಿದ್ದೇನೆ. ಸುದ್ದಿ ತಿಳಿದ ತಕ್ಷಣ ಜಿಲ್ಲಾಧಿಕಾರಿ ಡಿಸಿ ಆಫೀಸ್‌ನಿಂದ ಬಂದಿದ್ದಾರೆ. ಆದರೆ, ಇಲ್ಲಿ ಕೆಲಸ ಮಾಡುವ ಅಧಿಕಾರಿಗಳು ಬಂದಿಲ್ಲ. ನಾನು ಬಂದ ಮೇಲೂ ಕೆಲವರು ಹಾಜರಾತಿ ರಿಜಿಸ್ಟರ್‌ಗೆ ಸಹಿ ಹಾಕುತ್ತಿದ್ದರು. ಇದು ವಾಸ್ತವ. ನಾನು ಮುಚ್ಚಿಟ್ಟು ಮಾತಾಡಬಹುದು. ಆದರೆ, ನನಗೆ ಆತ್ಮವಂಚನೆ ಆಗಲಿದೆ ಎಂದು ಸಚಿವ ಕೃಷ್ಣಬೈರೇಗೌಡ ಬೇಸರ ವ್ಯಕ್ತಪಡಿಸಿದರು.

ಕತ್ತಲಲ್ಲಿ ಕಚೇರಿ ಸುತ್ತಾಡಿದ ಸಚಿವರು

ಬೆಳಗ್ಗೆ 10 ಗಂಟೆಗೆ ಬಂದ ಸಚಿವ ಕೃಷ್ಣಬೈರೇಗೌಡ ಅವರು ಆಡಳಿತ ಸೌಧವನ್ನು ಸುತ್ತಾಡಿದರು. ಕಾರಿಡಾರ್ ಮತ್ತು ವರಾಂಡದಲ್ಲಿ ಒಂದು ಲೈಟ್ ಕೂಡ ಇಲ್ಲದೆ ಕತ್ತಲಲ್ಲಿ ಸಂಚಾರ ಮಾಡಿದರು.

ಮಧ್ಯವರ್ತಿಗಳಿಗೆ ಸಚಿವ ಎಚ್ಚರಿಕೆ..

ಸರ್ಕಾರಿ ಕಚೇರಿಯಲ್ಲಿನ ಮಧ್ಯವರ್ತಿಗಳು ಮತ್ತು ಕೇಸ್ ವರ್ಕರ್‌ಗಳ ಸಹಾಯಕರ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಕೃಷ್ಣಬೈರೇಗೌಡ, ಉಪವಿಭಾಗಾಧಿಕಾರಿ ಕಚೇರಿ, ಸಬ್ ರಿಜಿಸ್ಟ್ರರ್ ಕಚೇರಿ, ತಹಸೀಲ್ದಾರ್ ಕಚೇರಿ, ರೆಕಾರ್ಡ್ ರೂಮ್ ಸೇರಿ ಎಲ್ಲ ಕಡೆಯೂ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂದು ಜನರು ಹೇಳುತ್ತಿದ್ದಾರೆ. ಮಧ್ಯವರ್ತಿಗಳ ಹಾವಳಿ ಇಲ್ಲದಂತೆ ಜನರೇ ನೇರವಾಗಿ ಕೆಲಸ ಮಾಡಿಸಿಕೊಳ್ಳುವ ವ್ಯವಸ್ಥೆಯನ್ನು ನಾವು ತರುತ್ತಿದ್ದೇವೆ. ಮಧ್ಯವರ್ತಿಗಳು ರೈತರ ದಿಕ್ಕು ತಪ್ಪಿಸುತ್ತಿದ್ದಾರೆ, ಎಚ್ಚರದಿಂದಿರಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net