

ತಿ.ನರಸೀಪುರ: ಬಡವರು ಮತ್ತು ಮಧ್ಯಮ ವರ್ಗದ ಜನರ ಬದುಕಿಗೆ ಆರ್ಥಿಕ ಚೈತನ್ಯ ತುಂಬುತ್ತಿರುವ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿನ ಲೋಪದೋಷಗಳನ್ನು ತಾಲೂಕು ಮಟ್ಟದ ಅಧಿಕಾರಿಗಳು ಸರಿಪಡಿಸಬೇಕು ಎಂದು ಸಮಿತಿ ಅಧ್ಯಕ್ಷ ಬಿ.ಮಹದೇವಪ್ರಭು ಸೂಚನೆ ನೀಡಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತಂತೆ ಪ್ರಗತಿ ಪರಿಶೀಲಿಸಿ ಮಾತನಾಡಿದ ಅವರು, ಗೃಹಲಕ್ಷ್ಮಿಯಿಂದ 513 ಮಹಿಳೆಯರು, ನಿರುದ್ಯೋಗಿ ಯುವಕರು ಯುವ ನಿಧಿ ಯೋಜನೆಗಳಿಂದ ತಾಲೂಕಿನಲ್ಲಿ ವಂಚಿತರಾಗಿದ್ದಾರೆ. ವಂಚಿತರನ್ನು ಪಟ್ಟಿಮಾಡಿ ಅವರೆಲ್ಲರೂ ಮುಂದಿನ ಸಭೆಯೊಳಗೆ ಫಲಾನುಭವಿಗಳಾಗಬೇಕು. ಆ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಗ್ರಾಮೀಣ ಜನರ ಜೀವನವನ್ನು ಹಸನುಗೊಳಿಸುವಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಸಫಲವಾಗಿವೆ. ಉಸ್ತುವಾರಿ ಸಚಿವ ಮಹದೇವಪ್ಪ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿಯೂ ಗ್ಯಾರಂಟಿ ಯೋಜನೆಗಳು ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಕ್ಕೆ ವರದಾನವಾಗಿವೆ. ಈ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸಬೇಕೆಂದು ಬಿ.ಮಹದೇವಪ್ರಭು ಸಲಹೆ ನೀಡಿದರು.
ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಅನುಕೂಲವಾಗಿರಬಹುದು. ಆದರೆ ಶಾಲಾ- ಕಾಲೇಜುಗಳಿಗೆ ನಿತ್ಯವೂ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಸಮರ್ಪವಾಗಿ ಬಸ್ ಬರುತ್ತಿಲ್ಲ. ಬಂದರೂ ನಿಲ್ಲಿಸುವುದಿಲ್ಲ. ಟಿಕೆಟನ್ನು ಬೇಕಾಬಿಟ್ಟಿ ನೀಡಲಾಗುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ದೂರುಗಳು ಬರುತ್ತಿದೆ. ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುವ ಬಗ್ಗೆ ಸರ್ಕಾರಿ ಸಾರಿಗೆ ಚಾಲಕ ಹಾಗೂ ನಿರ್ವಾಹಕರಿಗೆ ಸೂಚನೆ ನೀಡಬೇಕೆಂದು ಸಮಿತಿ ಸದಸ್ಯರು ಒತ್ತಾಯಿಸಿದರು.
ಸಭೆಯಲ್ಲಿ ಯುವ ನಿಧಿ ನೋಂದಣಿಯ ಪೋಸ್ಟರ್ ಬಿಡುಗಡೆ ಮಾಡಲಾಯಿತು. ತಾಪಂ ಕಾರ್ಯನಿರ್ವಹಣಾಧಿಕಾರಿ ಪಿ.ಎಸ್.ಅನಂತರಾಜು, ಯೋಜನಾಧಿಕಾರಿ ರಂಗಸ್ವಾಮಿ, ಸೆಸ್ಕ್ ಎಇಇ ಕೆ.ವಿ.ವೀರೇಶ್, ಸಿಡಿಪಿಒ ಗೋವಿಂದರಾಜು, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕಿ ಡಿ.ಎಂ.ರಾಣಿ, ಶಕ್ತಿ ಯೋಜನೆಯ ಕಾರ್ಯಕ್ರಮ ಅಧಿಕಾರಿ ಸೌಮ್ಯಾ, ಸದಾನಂದ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರಾದ ಅಭಿಷೇಕ್, ಸಲೀಂ ಅಹಮದ್, ಸಿ.ಕೃಷ್ಣ, ಡಿ.ಎಂ.ಪರಶಿವಮೂರ್ತಿ, ಎಸ್.ಮಂಜುನಾಥ್, ಕೇತಹಳ್ಳಿ ಸಿದ್ದಶೆಟ್ಟಿ, ಮಹದೇವಸ್ವಾಮಿ, ಗುರುಶ್ರೀ ರಂಗಸ್ವಾಮಿ, ಪ್ರತಾಪ್, ಕುಪ್ಯ ಗವಿ, ಮೊಹಮ್ಮದ್ ಸಲ್ಮಾನ್ ಇದ್ದರು.