

ಶ್ರೀರಂಗಪಟ್ಟಣ: ಟಿಎಪಿಸಿಎಂಎಸ್ ಸಹಕಾರ ರಂಗದಲ್ಲಿ ಮಾತೃ ಸಂಸ್ಥೆಯಾಗಿದ್ದು, ಕಳೆದ ಬಾರಿ ಉಂಟಾದ ನಮ್ಮಲ್ಲಿನ ವೈಫಲ್ಯಗಳನ್ನು ಈ ಬಾರಿ ಸರಿಪಡಿಸಿಕೊಂಡು ಸಂಘಟಿತರಾಗುವ ಮೂಲಕ ಯಶಸ್ಸು ಹಾಗೂ ಅಭಿವೃದ್ಧಿಗೆ ಕಾರ್ಯಕರ್ತರೆಲ್ಲರೂ ಕೈಜೋಡಿಸಬೇಕು ಎಂದು ಸೆಸ್ಕ್ ಅಧ್ಯಕ್ಷರೂ ಆದ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಮನವಿ ಮಾಡಿದರು.
ಪಟ್ಟಣದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಟಿಎಪಿಸಿಎಂಎಸ್ ಚುನಾವಣೆ ಹಿನ್ನೆಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಳೆದ ಬಾರಿ ನಮ್ಮ ಸ್ವಯಂಕೃತ ಅಪರಾಧದಿಂದ ಸಹಕಾರ ಕ್ಷೇತ್ರದಲ್ಲಿ ಸೋತಿದ್ದೇವೆ ಹೊರತು ಜನರು ಈಗಲೂ ಕೈಬಿಟಿಲ್ಲ. ಹೀಗಾಗಿ ಕಳೆದ ಭಾರಿ ಆದ ದೋಷಗಳು ಉಂಟಾಗದಂತೆ ಎಚ್ಚರ ವಹಿಸಬೇಕಿದೆ. ಕೆಲ ತಿಂಗಳ ಹಿಂದೆ ಪಿಕಾರ್ಡ್ ಬ್ಯಾಂಕ್ ಈಗ ನಮ್ಮ ಹಿಡಿತದಲ್ಲೇ ಇದ್ದು, ಹೊಸಬರು ಹಾಗೂ ಯುವಕರಿಗೆ ಹೆಚ್ಚು ಆದ್ಯತೆ ನೀಡಬೇಕಿದೆ. ಆದರೂ ಈ ನಡುವೆ ನಮ್ಮ ಬೆಂಬಲಿತ ಅಧ್ಯಕ್ಷರು ಸಂಘದ ಅಧಿಕಾರ ಹಿಡಿದ ಮೇಲೆ ಕೋಟ್ಯಂತರ ರೂ. ಆದಾಯ, ಗೊಬ್ಬರ ಘಟಕ, ಬ್ಯಾಂಕ್ ತೆರೆದಿದ್ದಾರೆ ಎಂದು ತಿಳಿಸಿದರು.
ತಾಲೂಕಿನ ಟಿಎಪಿಸಿಎಂಎಸ್ ಸಂಸ್ಥೆ ಅಭಿವೃದ್ಧಿ, ಲಾಭಗಳಿಕೆ ಹಾಗೂ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಯಾವುದೇ ಅಕ್ರಮ ಕಬಳಿಕೆ ಹಾಗೂ ಒತ್ತುವರಿಗೆ ಅವಕಾಶ ಸಿಗದಂತೆ ಇಂದಿಗೂ ಉಳಿಸುವ ಮೂಲಕ ಬಾಡಿಗೆ ರೂಪದಲ್ಲಿ ಲಕ್ಷಾಂತರ ರೂ. ಆದಾಯಗಳಿಸುವಲ್ಲಿ ಜಿಲ್ಲೆಯಲ್ಲೇ ಉತ್ತಮ ಹೆಸರು ಮಾಡುವಲ್ಲಿ ಯಶಸ್ವಿಯಾಗಿದ್ದು, ಅ.4ರಂದು ನಡೆಯಲಿರುವ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಅರ್ಹ ಅಭ್ಯರ್ಥಿಗಳನ್ನು ನಿರ್ದೇಶಕರನ್ನಾಗಿ ನೇಮಕಗೊಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ತಿಳಿಸಿದರು.
ಶಾಸಕನಾಗಿ ಮತ್ತು ಸೆಸ್ಕ್ ಅಧ್ಯಕ್ಷನಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳತ್ತ ಗಮನಹರಿಸಿದ್ದೇನೆ. ಕಾರ್ಯ ಒತ್ತಡಗಳಿಂದ ಜನರ ಕೈಗೆ ಸಿಗಲು ಸಾಧ್ಯವಾಗುತ್ತಿಲ್ಲ ಹೊರತು ಕ್ಷೇತ್ರದ ಜನರನ್ನು ಸೇರಿದಂತೆ ನನಗಾಗಿ ದುಡಿಯುವ ಯಾರನ್ನೂ ಮರೆತು ನಾನೊಬ್ಬನೆ ಮುನ್ನಡೆದಿಲ್ಲ ಎಂದು ಹೇಳಿದರು.
ಈ ಹಿಂದೆ 50 ಸಾವಿರ ಅಂತರಗಳಲ್ಲಿ ಸೋತ ಮೇಲೆ ಗೆಲ್ಲುವುದಿಲ್ಲ ಎಂಬ ಮಾತಿನ ನಡುವೆಯೂ ಜನರು ತಮ್ಮನ್ನು ಗೆಲ್ಲಿಸಿದ್ದಾರೆ. ಸೆಸ್ಕ್ ಅಧ್ಯಕ್ಷನಾಗಿ ನೇಮಿಸಿ ಜವಾಬ್ದಾರಿ ನೀಡುವ ಮೂಲಕ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಾಗೂ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ನಾಯಕತ್ವದಲ್ಲಿ ಹಾದಿಯಲ್ಲಿ ನೀರಾವರಿ ಇಲಾಖೆಗೆ 110 ಕೋಟಿ ರೂ., ಸಿಡಿಎಸ್, ವಿರಿಜಾ ನಾಲೆಗಳು ಹಾಗೂ ಉಪನಾಲೆಗಳ ಅಭಿವೃದ್ಧಿ, ರಸ್ತೆ, ಸಂಪರ್ಕ ರಸ್ತೆ, ಅಲ್ಪಸಂಖ್ಯಾತ, ಸಮಾಜಕಲ್ಯಾಣ ಇಲಾಖೆ ಸೇರಿದಂತೆ ಹಲವು ವಿಭಾಗಗಳಿಗೆ ಜಿಲ್ಲೆಯಲ್ಲೇ ಅತಿ ಹೆಚ್ಚಿನ ಅನುದಾನ, ಅನುಷ್ಠಾನಗಳನ್ನು ಜಾರಿಗೊಳಿಸುವ ಮೂಲಕ ಕ್ಷೇತ್ರದ ಸರ್ವೋತಮುಖ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ. ಜಿಲ್ಲೆಯ ಜೀವನಾಡಿ ಕೆಆರ್‌ಎಸ್ ಮತ್ತು ಉದ್ಯಾನಗಳ ಅಭಿವೃದ್ಧಿಗೂ ಸರ್ಕಾರ ಮಹತ್ವದ ಒತ್ತು ನೀಡಿದೆ . ಹೀಗಾಗಿ ಎಲ್ಲರೂ ಸಂಘಟಿತರಾಗಿ ಎಂದು ಸಲಹೆ ನೀಡಿದರು.
ಮನ್‌ಮುಲ್ ನಿರ್ದೇಶಕ ಹಾಗೂ ಮಾಜಿ ಅಧ್ಯಕ್ಷ ಬಿ.ಬೋರೇಗೌಡ ಮಾತನಾಡಿ, ಅ.4ರಂದು ಟಿಎಪಿಸಿಎಂಎಸ್ ಹಾಗೂ ನ.2ರಂದು ಎಂಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಎ ವರ್ಗದಲ್ಲಿ ಸೊಸೈಟಿಗಳ ಮುಖಾಂತರ ಮತ್ತು ಬಿ ವರ್ಗದಲ್ಲಿ ಬಿಡಿ ಸದಸ್ಯರ ಮುಖಾಂತರ ಚುನಾವಣೆ ನಡೆಯುತ್ತಿದ್ದು, ಸೊಸೈಟಿಗಳಲ್ಲಿ 4 ಸದಸ್ಯರು, ಬಿಡಿ ಸದಸ್ಯರಲ್ಲಿ 8 ಸ್ಥಾನಗಳನ್ನು ಗಳಿಸಬೇಕಿದೆ. ಎಂಡಿಸಿಸಿ ಬ್ಯಾಂಕ್‌ಗೂ 22 ಸೊಸೈಟಿಗಳ ಮೂಲಕ ಆಯ್ಕೆ ಮಾಡಬೇಕಿದ್ದು, ಸ್ಥಳಿಯ ಸಂಸ್ಥೆಗಳನ್ನು ನೇರವಾಗಿ ಚುನಾವಣೆ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲು ಎಲ್ಲರೂ ಸಹಕರಿಸಬೇಕು ಎಂದರು.
ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ನಂದೀಶ್, ಪುರಸಭಾ ಅಧ್ಯಕ್ಷ ಎಂ.ಎಲ್.ದಿನೇಶ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಚೆಲುವೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಪ್ರಕಾಶ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶುಭದಾಯಿನಿ, ಮಾಧ್ಯಮ ಸಂಚಾಲಕ ಎಂ.ಪುಟ್ಟೇಗೌಡ, ಕೆಪಿಸಿಸಿ ಹಿರಿಯ ಸದಸ್ಯ ಗಂಜಾಂ ಗಂಗಾಧರ್, ಮುಖಂಡ ಎನ್.ವಿ.ಚೆಲುವರಾಜು, ಬಸವರಾಜು, ಬೆಳಗೊಳ ಸ್ವಾಮೀಗೌಡ ಇತರರು ಇದ್ದರು.