ವಿದ್ಯುತ್ ತಾಂತ್ರಿಕ ದೋಷ ಸರಿಪಡಿಸಿ

Hescom suddi
Published on

ಉಪ್ಪಿನಬೆಟಗೇರಿ: ಸಮೀಪದ ಅಮ್ಮಿನಬಾವಿ ಗ್ರಾಮದ ಶ್ರೀ ಶಾಂತೇಶ್ವರನಗರ ಬಡಾವಣೆ ಹಾಗೂ ಸುತ್ತಲಿನ ಪ್ರದೇಶದಲ್ಲಿ ಗೃಹ ಬಳಕೆಗೆ ಸಂಪರ್ಕ ಪಡೆದಿರುವ ವಿದ್ಯುತ್ ಪ್ರಸರಣದಲ್ಲಿ ನಿರಂತರ ಕಿರಿಕಿರಿ ಉಂಟಾಗುತ್ತಿದ್ದು, ಕೂಡಲೆ ತಾಂತ್ರಿಕ ದೋಷವನ್ನು ಸರಿಪಡಿಸಬೇಕು ಎಂದು ಸ್ಥಳೀಯ ನಿವಾಸಿಗಳು ಹೆಸ್ಕಾಂ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಗೃಹ ಬಳಕೆಯ ಸಂಪರ್ಕದಲ್ಲಿ ಪ್ರಸ್ತುತ ಸುಮಾರು 280 ರಿಂದ 300 ವೋಲ್ಟೇಜ್ ಪ್ರಮಾಣದ ವಿದ್ಯುತ್ ಹರಿದು ಬರುತ್ತಿದೆ. ಇದರಿಂದ ವಿದ್ಯುನ್ಮಾನ ವಸ್ತುಗಳಾದ ಟಿವಿ, ಫ್ರಿಜ್, ವಾಷಿಂಗ್ ಮಷಿನ್ ಮುಂತಾದವು ಸುಟ್ಟು ಹೋಗುವ ಸಂಭವವಿದೆ. ಮನೆಗಳಲ್ಲಿ ಹೊಂದಿರಬಹುದಾದ ಯುಪಿಎಸ್ ಯಂತ್ರಗಳು ನಿಷ್ಕ್ರೀಯಗೊಳ್ಳುವ ಆತಂಕವಿದೆ ಎಂದೂ ಗ್ರಾಹಕರು ದೂರಿದ್ದಾರೆ.

ಅಮ್ಮಿನಬಾವಿ ಗ್ರಾಮದ ಶ್ರೀ ಶಾಂತೇಶ್ವರನಗರ ಬಡಾವಣೆಯಲ್ಲಿ ಮನೆ ಬಳಕೆಯ ನೀರಿಗಾಗಿ ಸ್ವತಂತ್ರವಾಗಿ ಹೊಂದಿರುವ ಕೊಳವೆಬಾವಿಗಳಲ್ಲಿನ ನೀರೆತ್ತುವ ಮೋಟರ್​ಗಳೂ 280 ರಿಂದ 300 ವೋಲ್ಟೇಜ್ ಪ್ರಮಾಣದ ವಿದ್ಯುತ್ ಪ್ರಸರಣದಿಂದಾಗಿ ಅವೂ ಸಹ ತಮ್ಮ ಕಾರ್ಯ ನಿಲ್ಲಿಸಬಹುದಾಗಿದೆ ಎಂಬ ಚಿಂತೆ ಇಲ್ಲಿಯ ಜನತೆ ಕಾಡುತ್ತಿದೆ.

ಗೃಹ ಬಳಕೆಗಾಗಿ ವಿದ್ಯುತ್ ಪ್ರಸರಣ 230 ರಿಂದ 250 ವೋಲ್ಟೇಜ್ ಮಾತ್ರ ಇರಬೇಕಾಗಿದ್ದು, ಪ್ರಸ್ತುತ ಅಧಿಕವಾದ ಅಂದರೆ ಸುಮಾರು 280 ರಿಂದ 300 ವೋಲ್ಟೇಜ್ ಪ್ರಮಾಣದ ವಿದ್ಯುತ್ ಪ್ರಸರಣದಿಂದ ಅಮ್ಮಿನಬಾವಿ ಗ್ರಾಮದ ಶ್ರೀ ಶಾಂತೇಶ್ವರನಗರ ಬಡಾವಣೆ ಹಾಗೂ ಸುತ್ತಲಿನ ಪ್ರದೇಶದಲ್ಲಿ ಗೃಹ ಬಳಕೆಯ ಗ್ರಾಹಕರಲ್ಲಿ ತೀವ್ರ ಆತಂಕ ಮನೆ ಮಾಡಿದೆ. ಜೊತೆಗೆ ಈ ಭಾಗದಲ್ಲಿ ನಿರಂತರ ವಿದ್ಯುತ್ ವ್ಯತ್ಯಯ ಕಾಡುತ್ತಿದ್ದು, ಹೆಸ್ಕಾಂ ಅಧಿಕಾರಿಗಳ ಮತ್ತು ಇತರೇ ಸಿಬ್ಬಂದಿ ವರ್ಗದ ಗಮನಕ್ಕೆ ತಂದರೂ ವಿದ್ಯುತ್ ಪ್ರಸರಣದ ಸಮಸ್ಯೆ ನಿವಾರಣೆಯಾಗದೇ ಉಳಿದಿದ್ದು, ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ ಈ ತಾಂತ್ರಿಕ ದೋಷವನ್ನು ಶೀಘ್ರ ನಿವಾರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net