ಹದಗೆಟ್ಟ ರಸ್ತೆ ಸರಿಪಡಿಸಿ

FotoJet (1)
Published on

ಎಂ ಎನ್​ ಕೋಟೆ: ರಸ್ತೆ ಸಂಪರ್ಕ ಸರಿಪಡಿಸದ ಶಾಸಕರ ಮತ್ತು ಸ್ಥಳಿಯ ಗ್ರಾಮ ಪಂಚಾಯಿತಿ ವಿರುದ್ಧ ಗುಬ್ಬಿ ತಾಲೂಕಿನ ಮುದ್ದೇನಹಳ್ಳಿ ಹಾಗೂ ಬಸವಪುರ ಗ್ರಾಮಸ್ಥರು ಗುರುವಾರ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಕಳೆದ ದಿನಗಳಿಂದ ಸುರಿಯುತ್ತಿರುವ ಮಳೆಗೆ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಕೆಸರು ಗದ್ದೆಯಾಗಿವೆ. ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಓಡಾಡಲು ಪರದಾಡುವಂತಾಗಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವಾರು ಬಾರಿ ದೂರು ನೀಡಿದರೂ ಯಾವುದೇ ರೀತಿಯ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಗ್ರಾಮದ ಮುಖಂಡ ಈಶಣ್ಣ ಮಾತನಾಡಿ, ಶಾಸಕರಿಗೂ ಹಾಗೂ ಅಲುಘಟ್ಟ ಗ್ರಾಮ ಪಂಚಾಯಿತಿಗೂ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ಮತಕ್ಕಾಗಿ ಬರುವ ಜನಪ್ರತಿನಿಧಿಗಳು ಗೆದ್ದ ಬಳಿಕ ತಿರುಗಿ ನೋಡುವುದಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಸರಿಪಡಿಸದಿದ್ದರೆ ಮುಂಬರುವ ಜಿಪಂ, ತಾಪಂ ಹಾಗೂ ಗ್ರಾಪಂ ಚುನಾವಣೆ ಬಹಿಷ್ಕಾರ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಮುಖಂಡರಾದ ಬಸವರಾಜು, ಸಿದ್ದಲಿಂಗಯ್ಯ, ಶಿವಣ್ಣ, ರಾಮಣ್ಣ, ರಮೇಶ್​, ಕುಮಾರ್​, ದೇವರಾಜು, ವಾಸಣ್ಣ ಹಾಗೂ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net