ವಿಜಯಪುರ : ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿ, ಕಬ್ಬು ಬೆಳೆಗಾರರ ಸಂಘದಿಂದ ಮನವಿ

IMG-20221012-WA0010
ವಿಜಯಪುರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕೆಂದು ಒತ್ತಾಯಿಸಿ ಕಬ್ಬು ಬೆಳೆಗಾರರ ಸಂಘದಿಂದ ಬುಧವಾರ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರಿಗೆ ಮನವಿ ಸಲ್ಲಿಸಲಾಯಿತು. ಅಶೋಕ ಮನಗೂಳಿ, ಶ್ರೀಮಂತ ದುದ್ದಗಿ, ಗುರುಪಾದ ಭಾಸಗಿ, ರಾಜು ಗುಂದಗಿ ಇನ್ನಿತರರಿದ್ದರು.
Published on

ವಿಜಯಪುರ : ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕೆಂದು ಒತ್ತಾಯಿಸಿ ಕಬ್ಬು ಬೆಳೆಗಾರರ ಸಂಘದಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.

ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಶ್ರೀಮಂತ ದುದ್ದಗಿ ಮಾತನಾಡಿ, 2022-23ನೇ ಸಾಲಿನ ಕಬ್ಬು ಬೆಳೆದ ರೈತರಿಗೆ ಕಬ್ಬಿಗೆ ನ್ಯಾಯಯುತವಾದ ವೈಜ್ಞಾನಿಕ ಬೆಲೆಯನ್ನು ನಿಗದಿಪಡಿಸಬೇಕೆಂದರು.

ಪ್ರಸಕ್ತ ವರ್ಷದ ಕಬ್ಬು ಅನುಸರಿಸುವ ಹಂಗಾಮವನ್ನು ಇನ್ನೆರಡು ವಾರಗಳಲ್ಲಿ ಆರಂಭವಾಗಲಿದ್ದು, ಜಿಲ್ಲೆಯ ಒಂಬತ್ತು ಸಕ್ಕರೆ ಕಾರ್ಖಾನೆಗಳು ಇಲ್ಲಿಯವರೆಗೆ 2022 -23ನೇ ಸಾಲಿನ ಕಬ್ಬಿಗೆ ಬೆಲೆಯನ್ನು ನಿಗದಿ ಪಡಿಸಿದೆ ಕಬ್ಬುನ್ನು ನುರಿಸಲಿಕ್ಕೆ ಸಕ್ಕರೆ ಕಾರ್ಖಾನೆಗಳು ಸಿದ್ಧತೆ ಮಾಡಿಕೊಂಡಿವೆ. ರಾಜ್ಯ ಸರ್ಕಾರ ಕೂಡ ಕಬ್ಬಿಗೆ ಬೆಲೆ ನಿಗದಿಪಡಿಸದೆ ರೈತರಿಗೆ ವಂಚನೆ ಮಾಡುತ್ತಿದ್ದು, ಸರ್ಕಾರದ ಧೋರಣೆಯನ್ನು ಖಂಡಿಸಿದರು.

ಉತ್ತರ ಪ್ರದೇಶದ ಸರ್ಕಾರ ಒಂದು ಟನ್ ಕಬ್ಬಿಗೆ 3500 ರೂ. ನಿಗದಿಪಡಿಸಿದೆ. ಅದರಂತೆ ಗುಜರಾತ್ ಸರ್ಕಾರ ಕೂಡ 4 ಸಾವಿರ ರೂ. ಬೆಲೆ ನಿಗದಿಪಡಿಸಿದೆ. ಆದರೆ ರಾಜ್ಯ ಸರ್ಕಾರ ಕಬ್ಬಿಗೆ ಬೆಲೆಯನ್ನು ನಿಗದಿಪಡಿಸದೆ ರೈತರಿಗೆ ಮೋಸ ಹಾಗೂ ವಂಚನೆ ಮಾಡುತ್ತಿರುವುದು ಖಂಡನೀಯ. ಕೂಡಲೇ ಸರ್ಕಾರ ಕಬ್ಬಿಗೆ ಒಂದು ಟನ್‌ಗೆ 3500 ರೂ. ಬೆಲೆಯನ್ನು ನಿಗದಿಪಡಿಸಬೇಕೆಂದು ಒತ್ತಾಯಿಸಿದರು.

ಮುಖಂಡ ಅಶೋಕ ಮನಗೂಳಿ ಮಾತನಾಡಿ, ಕೇಂದ್ರ ಸರ್ಕಾರ ಕಬ್ಬಿನಲ್ಲಿ ಸಕ್ಕರೆ ಇಳುವರಿ ಪ್ರಮಾಣವನ್ನು ಹೆಚ್ಚಿಸಿದೆ. ಈ ಹಿಂದಿನ ಹಿಂದಿನ ಸಕ್ಕರೆ ಇಳುವರಿಯ ಪ್ರಮಾಣ (ಶೇ.9.5) ಮುಂದುವರೆಸಿಕೊಂಡು ಹೋಗಬೇಕು. ಸಕ್ಕರೆ ಕಾರ್ಖಾನೆಗಳು ಸಕ್ಕರೆ ಇಳುವರಿ ಪ್ರಮಾಣದಲ್ಲಿ ಮೋಸ, ವಂಚನೆ ಮಾಡುತಿದ್ದು, ತೂಕದಲ್ಲೂ ಅನ್ಯಾಯ ಮಾಡುತ್ತಿವೆ. ಬೆಲೆ ನಿಗದಿಪಡಿಸದೆ ಸಕ್ಕರೆ ಕಾರ್ಖಾನೆಗಳು ಆರಂಭಿಸಲು ಅವಕಾಶ ನೀಡಬಾರದು. ಒಂದು ವೇಳೆ ಸಕ್ಕರೆ ಕಾರ್ಖಾನೆಗಳು ಬೆಲೆ ನಿಗದಿಪಡಿಸದಿದ್ದಲ್ಲಿ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಸಕ್ಕರೆ ಕಾರ್ಖಾನೆಗಳಿಗೆ ಬೀಗ ಹಾಕಿ ಸಕ್ಕರೆ ಕಾರ್ಖಾನೆಗಳ ವಿರುದ್ಧ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಈ ವೇಳೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ರೈತರ ಮನವಿ ಸ್ವೀಕರಿಸಿ ಮಾತನಾಡಿ, ನವೆಂಬರ್ 1 ಹಾಗೂ 2ರಂದು ಜಿಲ್ಲಾಡಳಿತ ಹಾಗೂ ಕಬ್ಬು ಬೆಳೆಗಾರರ ಸಂಘ, ಕಾರ್ಖಾನೆ ಮಾಲೀಕರೊಂದಿಗೆ ಚರ್ಚೆ ಹಮ್ಮಿಕೊಳ್ಳುತ್ತೇವೆಂದು ಭರವಸೆ ನೀಡಿದರು.

ಸಂಘದ ಉಪಾಧ್ಯಕ್ಷ ಗುರುಪಾದ ಭಾಸಗಿ, ಪ್ರಧಾನ ಕಾರ್ಯದರ್ಶಿ ರಾಜು ಗುಂದಗಿ, ಕಾರ್ಯದರ್ಶಿ ಬಾಬು ಕೊತಂಬರಿ, ಬಾಗಪ್ಪಗೌಡ ಪಾಟೀಲ, ಅಶೋಕ ಕೋಳಾರಿ, ಶ್ರೀಶೈಲ ನಂದೂರು, ಬಸವರಾಜ ತೆಲ್ಲೂರು, ಸಂಗಮೇಶ ಯಡ್ರಾಮಿ, ಬಸು ತಳವಾರ, ರವಿಗೌಡ ದೇವರಮನಿ, ಅಶೋಕ ಚಾಂದಕವಟೆ, ಪ್ರಸನ್ನ ಜೇರಟಗಿ, ಕಾಂತು ಆಲಮೇಲ, ಯಲ್ಲು ಹಳ್ಳಿ, ಶ್ರೀಮಂತ ಖಷ್ಕಿ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net