

ಮಡಿಕೇರಿ: ಮಳೆಯಿಂದ ಹಾನಿಯಾಗಿರುವ ಲೋಕೋಪಯೋಗಿ, ಪಂಚಾಯತ್ ರಾಜ್ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ರಸ್ತೆ ಸರಿಪಡಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚಿಸಿದರು.
ಮಳೆ ಹಾನಿ ಸಂಬಂಧಿಸಿದಂತೆ ವಿಡಿಯೋ ಸಂವಾದ ಮೂಲಕ ಮಾತನಾಡಿದ ಜಿಲ್ಲಾಧಿಕಾರಿ, ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಿಂದಾಗಿ ರಸ್ತೆಗಳು ಹಾನಿಯಾಗಿದ್ದು, ರಸ್ತೆ ಸರಿಪಡಿಸುವ ಕಾರ್ಯವನ್ನು ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡದಂತೆ ಸೂಚಿಸಿದರು.
ಹೆಚ್ಚಿನ ಮಳೆಯಿಂದ ಮನೆಗಳು ಹಾನಿಯಾಗಿದ್ದು, ಪರಿಹಾರ ವಿತರಿಸುವುದರ ಜತೆಗೆ ಮನೆ ನಿರ್ಮಾಣ ಮಾಡಬೇಕು. ಈ ಸಂಬಂಧ ವರದಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಮಳೆಯಿಂದಾಗಿ ಬರೆಕುಸಿಯುತ್ತಿದ್ದು, ಈ ಬಗ್ಗೆ ಗಮನಹರಿಸಬೇಕು. ಸಾರಿಗೆ ಸಂಚಾರಕ್ಕೆ ಯಾವುದೇ ರೀತಿಯ ವ್ಯತ್ಯಯ ಉಂಟಾಗದಂತೆ ಗಮನಹರಿಸುವಂತೆ ಜಿಲ್ಲಾಧಿಕಾರಿ ಹೇಳಿದರು.
ಎಲ್ಲಾ ಹಂತದ ಅಧಿಕಾರಿ ತಮ್ಮ ತಮ್ಮ ವ್ಯಾಪ್ತಿಯ ಕಾರ್ಯಗಳ ಬಗ್ಗೆ ಸರಿಯಾಗಿ ನಿಭಾಯಿಸುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು. ವಿಡಿಯೋ ಸಂವಾದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.