

ಮೈಸೂರು: ಕಬ್ಬು ಬೆಳೆಗೆ ನ್ಯಾಯಯುತ ದರ ನಿಗದಿ ಪಡಿಸುವಂತೆ ಒತ್ತಾಯಿಸಿ ಸೆ.26 ರಂದು ವಿಧಾನಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.
ಪ್ರಸಕ್ತ ಸಾಲಿನಲ್ಲಿ ಕಬ್ಬಿನ ಎಫ್‌ಆರ್‌ಪಿ ದರ ಟನ್‌ಗೆ 3,050 ರೂ. ದರ ನಿಗದಿ ಮಾಡಿರುವುದು ನ್ಯಾಯ ಸಮ್ಮತವಲ್ಲ. ದರ ಪುನರ್ ಪರಿಶೀಲಿಸುವಂತೆ ಒತ್ತಾಯಿಸಿ ಆ.12 ರಂದು ರಾಜ್ಯಾದ ಎಲ್ಲ ತಾಲೂಕು, ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆದರೂ ಸರ್ಕಾರ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡದೆ ಇರುವುದು ರೈತರಿಗೆ ಮಾಡಿದ ಅವಮಾನ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಕಬ್ಬು ಉತ್ಪಾದನೆಗೆ ಬಳಸುವ ರಸಗೊಬ್ಬರ, ಪೊಟ್ಯಾಶ್, ಡಿಎಪಿ ದರ ಏರಿಕೆಯಾಗಿದೆ. ಕಟಾವು, ಕೂಲಿ, ಸಾಗಾಣಿಕೆ ವೆಚ್ಚ, ಬೀಜದ ಬೆಲೆ ಏರಿಕೆಯಾಗಿದೆ. ಆದರೆ, ಕೇಂದ್ರ ಸರ್ಕಾರ ಟನ್ ಕಬ್ಬಿಗೆ 3,050 ರೂ. ನಿಗದಿ ಮಾಡಿರುವುದು ಸರಿಯಲ್ಲ. ಈ ದರವನ್ನು ಪುನರ್ ಪರಿಷ್ಕರಿಸಲೇ ಬೇಕು ಎಂದು ಒತ್ತಾಯಿಸಿದರು.
ಕಬ್ಬಿನಿಂದ ಬರುವ ಸಕ್ಕರೆ ಇಳುವರಿ ಪ್ರಮಾಣವನ್ನು ಶೇ.10.25ಕ್ಕೆ ಏರಿಕೆ ಮಾಡುವ ಮೂಲಕ ಸರ್ಕಾರ ಕಬ್ಬು ಬೆಳೆಗಾರರಿಗೆ ಮತ್ತೊಂದು ದ್ರೋಹ ಬಗೆದಿದೆ. ಇದರಿಂದ ರೈತರಿಗೆ ಟನ್ ಕಬ್ಬಿಗೆ 75 ರೂ. ಕಡಿತವಾಗುತ್ತದೆ. ಉತ್ತ ಪ್ರದೇಶದ ಸರ್ಕಾರದ ಮಾನದಂಡದಂತೆ ಕಬ್ಬಿಗೆ ಕನಿಷ್ಠ 3,500 ರೂ. ದರ ನಿಗದಿಯಾಗಬೇಕು ಎಂದು ಆಗ್ರಹಿಸಿದರು.