

ಬೆಂಗಳೂರು: ಬಿಡಿಎ ನಿರ್ಮಿತ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೂಲಸೌಕರ್ಯ ಪರಿಶೀಲನೆಗೆ ದಿನ ನಿಗದಿ ಮಾಡುವಂತೆ ಶಾಸಕ ಸುರೇಶ್‌ಕುಮಾರ್ ಅವರು ಡಿಸಿಎಂಗೆ ಪತ್ರ ಬರೆದು ಕೋರಿದ್ದಾರೆ.
ಈ ಸಂಬಂಧ ಬುಧವಾರ ಪತ್ರ ಬರೆದಿರುವ ಸುರೇಶ್‌ಕುಮಾರ್, ಇತ್ತೀಚಿಗೆ ಮುಕ್ತಾಯವಾದ ಬೆಳಗಾವಿ ಅಧಿವೇಶನದ ಪ್ರಶ್ನೋತ್ತರದಲ್ಲಿ ಕೆಂಪೇಗೌಡ ಲೇಔಟ್ ವಿಚಾರವಾಗಿ ಕೇಳಲಾಗಿದ್ದ ಪ್ರಶ್ನೆಗೆ ಬಿಡಿಎ ವತಿಯಿಂದ ಒದಗಿಸಲಾದ ಉತ್ತರ ಸಮರ್ಪಕವಾಗಿರಲಿಲ್ಲ. ಮೂಲಸೌಕರ್ಯ ಒದಗಿಸದಿದ್ದರೂ, ಸೈಟ್ ಹಂಚಿಕೆದಾರರಿಗೆ ಸೌಲಭ್ಯ ಒದಗಿಸಲಾಗಿದೆ ಎಂಬ ಉತ್ತರ ನೀಡಲಾಗಿತ್ತು. ಇದನ್ನಾಧರಿಸಿ ಇತ್ತೀಚಿಗೆ ಬಡಾವಣೆಗೆ ಭೇಟಿ ನೀಡಿ ವೀಕ್ಷಿಸಿದಾಗ ಮೂಲಸೌಕರ್ಯದ ಕೊರತೆ ಕಂಡಿತು. ಹೀಗಾಗಿ ಸೌಲಭ್ಯ ಒದಗಿಸಿರುವ ಕುರಿತು ಒಟ್ಟಿಗೆ ಪರಿಶೀಲನೆ ನಡೆಸಲು ದಿನ ನಿಗದಿ ಮಾಡಬೇಕು ಎಂದು ಕೋರಿದ್ದಾರೆ.
ನಿರಂತರತೆ ಇಲ್ಲದೆ ಸಮಸ್ಯೆ:
ಕೆಂಪೇಗೌಡ ಬಡಾವಣೆ ವ್ಯಾಪ್ತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆದಿಲ್ಲ. ಇನ್ನೂ ಶೇ.40 ಭಾಗದಷ್ಟು ಜಮೀನು ಸ್ವಾಧೀನ ಆಗಿಲ್ಲ. ಇದರಿಂದ ಹಲವು ಬ್ಲಾಕ್‌ಗಳಲ್ಲಿ ರಸ್ತೆ ಸೇರಿದಂತೆ ಇನ್ನಿತರ ಸೌಲಭ್ಯವನ್ನು ಒದಗಿಸಲು ಸಾಧ್ಯವಾಗಿಲ್ಲ. ರಸ್ತೆ ನಿರ್ಮಾಣ ಜಾಲ ಹಾಗೂ ಇನ್ನಿತರ ಸೌಕರ್ಯಕ್ಕೆ ಸಂಬಂಧಿಸಿದಂತೆ ನಿರಂತರತೆ ಕಾಯ್ದುಕೊಳ್ಳಲು ಸಾಧ್ಯವಾಗದ ಕಾರಣ ಮನೆ ನಿರ್ಮಿಸಿಕೊಳ್ಳುವವರಿಗೆ ಕಷ್ಟವಾಗಿದೆ. ಆದರೆ, ಬಿಡಿಎ ಅಧಿಕಾರಿಗಳು ಅಂತಹ ಹೆಚ್ಚಿನ ಸಮಸ್ಯೆ ಇಲ್ಲವೆಂಬ ಮಾಹಿತಿಯನ್ನು ನಗರಾಭಿವೃದ್ಧಿ ಇಲಾಖೆಗೆ ರವಾನಿಸಿದ್ದರು. ಅದನ್ನೇ ಡಿಸಿಎಂ ಅವರು ಅನುಮೋದಿಸಿ ಪ್ರಶ್ನೋತ್ತರ ವೇಳೆ ನೀಡಿದ್ದರು.
ಈ ವಿಚಾರವಾಗಿ ಸೈಟ್ ಹಂಚಿಕೆದಾರರ ಸಂಘಟನೆಯಾದ ಎನ್‌ಪಿಕೆಎಲ್ ಮುಕ್ತ ವೇದಿಕೆಯ ಪದಾಧಿಕಾರಿಗಳು ಬಿಡಿಎ ಅಧಿಕಾರಿಗಳನ್ನು ಸಂಪರ್ಕಿಸಿ ಮೂಲಸೌಕರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಮನವಿ ಸಲ್ಲಿಸಿದ್ದಾರೆ.