ಗ್ರಾಪಂಗಳಲ್ಲಿ ದೂರದೃಷ್ಟಿ ಯೋಜನೆ ಅನುಷ್ಠಾನ ಕಾರ್ಯಾಗಾರ

mng-aug19-zp1
Published on

ಮಂಗಳೂರು: ಗ್ರಾಪಂ ಆಡಳಿತ ಅಸ್ತಿತ್ವಕ್ಕೆ ಬಂದಾಗ ಮುಂದಿನ ಐದು ವರ್ಷಗಳ ಅವಧಿಗೆ ಯಾವೆಲ್ಲ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು ಎಂದು ರೂಪಿಸುವ ಯೋಜನೆಯೇ ದೂರದೃಷ್ಟಿ ಯೋಜನೆ. ಇದು ಗ್ರಾಮದ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರಾಥಮಿಕ ಘಟ್ಟ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕುಮಾರ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಗ್ರಾಪಂಗಳ ದೂರದೃಷ್ಟಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ನೋಡಲ್ ಅಧಿಕಾರಿಗಳಿಗೆ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಯೋಜನೆ ತಯಾರಿಸುವ ಮೊದಲು ಸಂಪನ್ಮೂಲ ವಿಶ್ಲೇಷಣೆ, ಸಮಸ್ಯೆಗಳನ್ನು ವಿಶ್ಲೇಷಣೆ ಮಾಡುವುದು ಅಗತ್ಯ. ಇದರಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಯೂ ಇರಬೇಕು. ಆ ಕಾರಣಕ್ಕಾಗಿಯೇ ಪಂಚಾಯಿತಿ ಮಟ್ಟದಲ್ಲಿ ಗ್ರಾಮಸಭೆ, ವಾರ್ಡ್ ಸಭೆ, ಅಂಗವಿಲಕರ, ಮಕ್ಕಳ, ಮಹಿಳಾ ವಿಶೇಷ ಗ್ರಾಮ ಸಭೆಗಳನ್ನು ಆಯೋಜಿಸಲಾಗುತ್ತದೆ. ಕಚೇರಿಯಲ್ಲಿಯೇ ಕುಳಿತು (ಟೇಬಲ್ ಟಾಪ್) ಅಥವಾ ತರಾತುರಿಯಲ್ಲಿ ಯೋಜನೆಗಳನ್ನು ರೂಪಿಸಬಾರದು. ವಾಸ್ತವ ಸಮಸ್ಯೆಗಳನ್ನು ವಿಶ್ಲೇಷಿಸಿ ಪಟ್ಟಿ ಮಾಡಬೇಕು. ಹಂತ ಹಂತವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದರು.
ವೀಡಿಯೋ ಮೂಲಕ ಸಂದೇಶ ನೀಡಿದ, ಗ್ರಾಮೀಣಾಭೀವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಗ್ರಾಮೀಣ ಭಾಗದಲ್ಲಿ ರಸ್ತೆಗಳ ಅಭಿವೃದ್ಧಿಗಿಂತ ಮಾನವ ಸಂಪನ್ಮೂಲದ ಬೆಳವಣಿಗೆಯಾಗಬೇಕು. ಶಿಕ್ಷಣ, ಆರೋಗ್ಯ, ಮಕ್ಕಳ ಪೌಷ್ಟಿಕತೆ ಮೊದಲಾದವುಗಳನ್ನು ಒದಗಿಸುವ ಕುರಿತಂತೆ ಚಿಂತನೆ ನಡೆಯಬೇಕು. ಸಾಮಾಜಿಕ ಬದಲಾವಣೆಯಾಗಬೇಕಾದರೆ ಶಿಕ್ಷಣಕ್ಕೆ ಆದ್ಯತೆ ನೀಡುವುದು ಅಗತ್ಯ ಎಂದರು.
ರಾಜ್ಯ ಗ್ರಾಮೀಣಾಭಿವೃಧ್ಧಿ ಸಂಸ್ಥೆ ಅಧಿಕಾರಿ ಅಬೂಬಕ್ಕರ್, ಅವರು ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಾಗಾರ ನಡೆಸಿಕೊಟ್ಟರು.
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಆನಂದ ಕುಮಾರ್, ಮುಖ್ಯ ಯೋಜನಾಧಿಕಾರಿ ಸಂಧ್ಯಾ ಕೆಎಸ್, ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಎಚ್.ಆರ್.ನಾಯಕ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net