

ಕೂಡ್ಲಿಗಿ: ಮಾಸಾಶನ ಹೆಚ್ಚಳ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಾಲೂಕು ದೇವದಾಸಿಯರ ಕ್ಷೇಮಾಭಿವೃದ್ಧಿ ಒಕ್ಕೂಟ ಶುಕ್ರವಾರ ತಹಸೀಲ್ದಾರ್ ಎಸ್.ಮಹಾಬಲೇಶ್ವರಗೆ ಮನವಿ ಸಲ್ಲಿಸಿತು.
ವಿಮುಕ್ತ ದೇವದಾಸಿಯರಿಗೆ 5 ಸಾವಿರ ರೂ. ಮಾಸಾಶನ ನೀಡಬೇಕು. ಸಹಾಯ ಧನ ಮೊತ್ತ 5 ಲಕ್ಷ ರೂ.ಗೆ ಹೆಚ್ಚಿಸಬೇಕು. ಪುನರ್ವಸತಿ ಯೋಜನೆಯಡಿ ನಿರ್ಮಿಸಿಕೊಂಡ ಮನೆಗೆ 5 ಲಕ್ಷ ರೂ.ಗಿಂತ ಹೆಚ್ಚು ಹಣ ನೀಡಬೇಕು. ಮನೆ ನಿರ್ಮಿಸಿಕೊಳ್ಳಲು ಸರ್ಕಾರವೇ ಜಾಗ ನೀಡಬೇಕು. ಸರ್ವೇ ಪಟ್ಟಿಯಲ್ಲಿ ಬಿಟ್ಟು ಹೋದವರ ಹೆಸರು ಸೇರ್ಪಡೆ ಮಾಡಬೇಕು. ಪಿಡಿಒಗಳು ನಿವೇಶನಗಳ ದೃಢೀಕರಣ ಪತ್ರ ನೀಡಲು ಕ್ರಮಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು. ಒಕ್ಕೂಟದ ಪದಾಧಿಕಾರಿಗಳಾದ ರೇಣುಕಾ, ಕೊಟ್ರಮ್ಮ, ಬಸಮ್ಮ, ಮಂಜಮ್ಮ, ದುರ್ಗಮ್ಮ, ಸಿಪಿಐ ತಾಲೂಕು ಕಾರ್ಯದರ್ಶಿ ಎಚ್.ವೀರಣ್ಣ, ಎಐವೈಎಫ್ ಜಿಲ್ಲಾ ಅಧ್ಯಕ್ಷ ಕಟ್ಟೆ ಬಸಪ್ಪ, ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಇಸ್ಮಾಯಿಲ್, ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಯು.ಪೆನ್ನಪ್ಪ ಇದ್ದರು.