ಆ.11 ರಂದು ಐದು ಸಾವಿರ ಜನರಿಂದ ಬೈಕ್ ರ‍್ಯಾಲಿ: ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ ಮಾಹಿತಿ

TIPPAREDDY
Published on

ಚಿತ್ರದುರ್ಗ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಆ.11 ರಂದು ನಗರದಲ್ಲಿ ಬೃಹತ್ ಬೈಕ್ ರ‍್ಯಾಲಿ ಏರ್ಪಡಿಸಲಾಗಿದೆ ಎಂದು ಶಾಸಕ ಜಿ. ಎಚ್. ತಿಪ್ಪಾರೆಡ್ಡಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದಾಜು ಐದು ಸಾವಿರ ಜನರು ಭಾಗವಹಿಸುವ ಈ ರ್ಯಾಲಿ, ಬೆಳಗ್ಗೆ 9 ಗಂಟೆಗೆ ಚಂದ್ರವಳ್ಳಿಯಿಂದ ಆರಂಭವಾಗಲಿದ್ದು, ನಗರದ ವಿವಿಧ ಮಾರ್ಗಗಳಲ್ಲಿ ಸಂಚರಿಸಿ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಸಮಾಪನಗೊಳ್ಳಲಿದೆ ಎಂದರು.

ರಾಷ್ಟ್ರೀಯ ಧ್ವಜವನ್ನು ಹಿಡಿದು, ಭಾರತ್ ಮಾತಾಕೀ ಜೈ ಘೋಷಣೆಯೊಂದಿಗೆ ಸಾಗುವ ರ‍್ಯಾಲಿ ಪಕ್ಷಾತೀತವಾಗಿರಲಿದೆ. ಬಿಜೆಪಿ ಬಾವುಟ, ಶಾಲು ಇತ್ಯಾದಿ ಇರುವುದಿಲ್ಲ. ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ಮಹತ್ವವನ್ನು ಸಾರುವ ಹಾಗೂ ಆ.13 ರಿಂದ 15 ರವರೆಗೆ ಹಮ್ಮಿಕೊಂಡಿರುವ ಹರ್​ಘರ್ ತಿರಂಗಾ ಅಭಿಯಾನದ ಕುರಿತಂತೆ ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಿರುವ ರ‍್ಯಾಲಿಯಲ್ಲಿ ನಾಗರಿಕರು, ಯುವಜನರು, ಅಧಿಕಾರಿ-ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ ಮಾತನಾಡಿ, ಅಂಚೆ ಕಚೇರಿ, ರಾಷ್ಟ್ರೀಕೃತ ಬ್ಯಾಂಕ್, ಗ್ರಾಪಂ, ನಗರ ಸ್ಥಳೀಯ ಸಂಸ್ಥೆಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಲಭ್ಯವಿರುವ ರಾಷ್ಟ್ರ ಧ್ವಜಗಳನ್ನು ಖರೀದಿಸಿ ಪ್ರತಿ ಮನೆ, ಮನೆಯಲ್ಲಿ ಹಾರಿಸುವಂತೆ ನಾಗರಿಕರನ್ನು ಕೋರಿದರು.

ತಿರಂಗಾದ ಮಹತ್ವ, ಸ್ವಾತಂತ್ರ್ಯ ಹೋರಾಟದ ಅರಿವನ್ನು ಜಾಗೃತಿಗೊಳಿಸಲು ಬಿಜೆಪಿ ಕಳೆದ 2016 ಹಾಗೂ 17ರ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಬೈಕ್ ರ್ಯಾಲಿ, ತಿರಂಗಾಯಾತ್ರೆ, ವಾಕ್​ಥಾನ್, ಮ್ಯಾರಥಾನ್ ನಡೆಸಿತ್ತು ಎಂದು ನೆನಪಿಸಿದರು.

ಕುಡಾ ಅಧ್ಯಕ್ಷ ಸುರೇಶ್ ಸಿದ್ದಾಪುರ, ನಗರಸಭೆ ಸದಸ್ಯ ಸುರೇಶ್, ಪಕ್ಷದ ಮುಖಂಡರಾದ ಸಂಪತ್, ಮಾಧುರಿ ಗಿರೀಶ್, ನಂದಿ ನಾಗ ರಾಜ್, ವೆಂಕಟೇಶ್ ಯಾದವ್, ರೇಖಾ, ನಾಗರಾಜ್ ಬೇಂದ್ರೆ, ಕಲ್ಲೇಶಯ್ಯ, ನವೀನ್ ಚಾಲುಕ್ಯ, ದಗ್ಗೆ ಶಿವಪ್ರಕಾಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net