ಕಾಸರಗೋಡು: ತಲಪಾಡಿಯಲ್ಲಿ ನಿಯಂತ್ರಣ ಕಳೆದುಕೊಂಡ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಸ್ ತಲಪ್ಪಾಡಿ ಕೆ.ಸಿ.ರೋಡ್ ಭಾಗದಿಂದ ಆಗಮಿಸುತ್ತಿದ್ದ ಆಟೋರಿಕ್ಷಾ ಹಾಗೂ ಬಸ್ ಪ್ರಯಾಣಿಕರ ತಂಗುದಾಣಕ್ಕೆ ಡಿಕ್ಕಿಯಾಗಿ ಐವರು ಮೃತಪಟ್ಟಿದ್ದಾರೆ.
ಆಟೋ ಚಾಲಕ ಹಾಗೂ ಅದರಲ್ಲಿದ್ದ ಹತ್ತರ ಹರೆಯದ ಬಾಲಕಿ ಹಾಗೂ ಇತರ ಮೂವರು ಮಹಿಳೆಯರು ಮೃತಪಟ್ಟಿದ್ದಾರೆ. ಬಸ್ಸಿಗಾಗಿ ಕಾದು ನಿಂತಿದ್ದವರು ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ.
ಕಾಸರಗೋಡಿನಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ ಮೊದಲು ಆಟೋ ರಿಕ್ಷಾಗೆ ಡಿಕ್ಕಿಯಾಗಿ, ನಂತರ ಸನಿಹದ ಬಸ್ ನಿಲ್ದಾಣ ಕಟ್ಟಡಕ್ಕೆ ಡಿಕ್ಕಿಯಾಗಿದೆ. ಮೃತದೇಹಗಳನ್ನು ಮಂಜೇಶ್ವರ ತಾಲೂಕು ಆಸ್ಪತ್ರೆ ಹಾಗೂ ಮಂಗಳೂರಿನ ಆಸ್ಪತ್ರೆಗಳಿಗೆ ಕೊಂಡೊಯ್ಯಲಾಗಿದೆ. ಅಪಘಾತದಿಂದ ಆಟೋ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದ ಸಿಸಿ ಕ್ಯಾಮರಾ ದೃಶ್ಯಾವಳಿ ಲಭ್ಯವಾಗಿದ್ದು, ಬಸ್ ವೇಗದಿಂದ ಸಂಚರಿಸುತ್ತಿತ್ತೆಂದು ಸ್ಥಳೀಯ ನಿವಾಸಿಗಳೂ ತಿಳಿಸಿದ್ದಾರೆ.