ಗಾಂಜಾ ಮಾರಾಟ ಪ್ರಕರಣದಲ್ಲಿ ಪಶ್ಚಿಮ ಬಂಗಾಳದ ಐವರಿಗೆ ಜೈಲು

dist Court building
Published on

ಶಿವಮೊಗ್ಗ: ತೀರ್ಥಹಳ್ಳಿ ವಿಠ್ಠಲ ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಪಶ್ವಿಮ ಬಂಗಾಳದ ಐವರಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತಲಾ ನಾಲ್ಕು ವರ್ಷ ಕಠಿಣ ಕಾರಾಗೃಹ ಶಿಕ್ಷೆ, 25 ಸಾವಿರ ರೂ. ದಂಡ ವಿಧಿಸಿದೆ. ದಂಡ ಕಟ್ಟಲು ವಿಫಲರಾದಲ್ಲಿ ಹೆಚ್ಚುವರಿ 6 ತಿಂಗಳು ಸಾದಾ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

ಪಶ್ಚಿಮ ಬಂಗಾಳ ರಾಜ್ಯದ ಮಾಲ್ಡ ಜಿಲ್ಲೆಯ ಟೆಂಗಾಬಾರದ ಅಲೋಕ್ ಮಂಡಲ್(34), ಕೂಚ್‌ಬೆಹಾರ್ ಜಿಲ್ಲೆಯ ಪುರ್ಬ ಭೋಗ್ದಾಬ್ರಿಯ ಶ್ರೀಭಾಷ್ ಸರ್ಕಾರ್(20), ಉತ್ತರ್ ಸಿಂಗಿಮರಿಯ ಅಮ್ರಿತ್ ಮಂಡಲ್(27), ಖಲಿಷ ನಿವಾಸಿ ಸಂಕರ್ ಬ್ಯಾಪಾರಿ(28) ಹಾಗೂ ಕೂಚ್‌ಬೆಹಾರ್ ಜಿಲ್ಲೆಯ ದಿನ್ಹಟ ಜಂಬರಿ ಗ್ರಾಮದ ಹರದನ್ ಮಂಡಲ್ (32) ಶಿಕ್ಷೆಗೆ ಒಳಗಾದವರು.

2022ರ ಜು.12ರಂದು ವಿಠ್ಠಲನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮಾಹಿತಿ ಮೇರೆಗೆ ತೀರ್ಥಹಳ್ಳಿ ಡಿವೈಎಸ್‌ಪಿ ಶಾಂತವೀರ್ ನೇತೃತ್ವದಲ್ಲಿ ತೆರಳಿ ಐವರನ್ನು ಬಂಧಿಸಿ 1.564 ಕೆಜಿ ಗಾಂಜಾ, 3,550 ರೂ. ನಗದು, 5 ಮೊಬೈಲ್‌ಗಳನ್ನು ಜಪ್ತಿ ಮಾಡಿ ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.

ಆಗಿನ ತನಿಖಾಧಿಕಾರಿ ತೀರ್ಥಹಳ್ಳಿ ಇನ್‌ಸ್ಪೆಕ್ಟರ್ ಅಶ್ವತ್‌ಗೌಡ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶ ಮಂಜುನಾಥ್ ನಾಯಕ್ ಅವರು ಐವರಿಗೂ ಕಠಿಣ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರಿ ಅಭಿಯೋಜಕ ಎ.ಎಂ.ಸುರೇಶ್‌ಕುಮಾರ್ ಸರ್ಕಾರದ ಪರ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net