ಅಪಘಾತದಲ್ಲಿ ಒಂದೇ ಕುಟುಂಬದ ಐವರ ಸಾವು

New Accident new
Published on

ಹುಬ್ಬಳ್ಳಿ : ನಿಶ್ಚಿತಾರ್ಥ ಮುಗಿಸಿ ವಾಪಸ್ಸು ಊರಿಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದರಿಂದ ನಿಶ್ಚಿತಾರ್ಥವಾದ ಯುವತಿ ಶ್ವೇತಾ ಶೆಟ್ಟಿ ಸೇರಿದಂತೆ ಒಂದೇ ಕುಟುಂಬದ ಐವರು ಮೃತಪಟ್ಟಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಕಿರೇಸೂರ ಗ್ರಾಮದ ಬಳಿಯ ಹೆದ್ದಾರಿಯಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದೆ.

ಅಪಘಾತದಲ್ಲಿ ಮೃತಪಟ್ಟ ವಿಠ್ಠಲ ಶೆಟ್ಟಿ ಅವರು ಬದಾಮಿ ತಾಲೂಕಿನ ಕುಳಗೇರಿ ಕ್ರಾಸ್​ನಲ್ಲಿ ಕಳೆದ ಮೂರು ದಶಕಗಳಿಂದ ಹೋಟೆಲ್ ವ್ಯವಹಾರ ಮಾಡಿಕೊಂಡಿದ್ದರು. ಅವರ ಮಗಳಾದ ಶ್ವೇತಾ ಶೆಟ್ಟಿ ನಿಶ್ಚಿತಾರ್ಥಕ್ಕೆಂದು ಸಾಗರ ತಾಲೂಕಿನ ಹಾವಿನಹಳ್ಳಿ ಮೂರ್ಪಿಗೆ ತೆರಳಿದ್ದರು.

ಭಾನುವಾರ ನಿಶ್ಚಿತಾರ್ಥ ಮುಗಿಸಿಕೊಂಡು, ಮಂಗಳವಾರ ಬೆಳಗಿನಜಾವ 5 ಗಂಟೆಗೆ ಸಾಗರದಿಂದ ಕಾರಿನಲ್ಲಿ ಹೊರಟಿದ್ದಾರೆ. ವಿಠ್ಠಲ ಅವರ ಪುತ್ರ ಸಂದೀಪ ಕಾರು ಚಲಾಯಿಸುತ್ತಿದ್ದ. ಮಾರ್ಗ ಮಧ್ಯೆ ಹುಬ್ಬಳ್ಳಿ ಸಮೀಪದ ವರೂರು ಬಳಿ ಸಂಬಂಧಿಕರನ್ನೂ ಭೇಟಿಯಾಗಿದ್ದಾರೆ. ನಂತರ ಸುಮಾರು 8.30ಕ್ಕೆ ಕಿರೇಸೂರ ಬಳಿ ತಿರುವಿನಲ್ಲಿ ಕಾರು ಸಂದೀಪನ ನಿಯಂತ್ರಣ ತಪ್ಪಿ, ಎದುರಿಗೆ ಬರುತ್ತಿದ್ದ ಲಾರಿಗೆ ಗುದ್ದಿದೆ.

ಅಪಘಾತದ ರಭಸಕ್ಕೆ ಕಾರಿನ ಮುಂಭಾಗವೆಲ್ಲ ನುಜ್ಜುಗುಜ್ಜಾಗಿದೆಯಲ್ಲದೆ, ಲಾರಿಯ ಮುಂಭಾಗವೂ ಕಿತ್ತು ಹೋಗಿದೆ. ಕಾರಿನಲ್ಲಿದ್ದ ವಿಠ್ಠಲ ಶೆಟ್ಟಿ, ಅವರ ಪುತ್ರಿ ಶ್ವೇತಾ, ಪತ್ನಿ ಶಶಿಕಲಾ, ಕಾರು ಚಲಾಯಿಸುತ್ತಿದ್ದ ಪುತ್ರ ಸಂದೀಪ, ವಿಠ್ಠಲ ಅವರ ಅಣ್ಣ ಮಗಳು ಅಂಜಲಿ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ನಿಶ್ಚಿತಾರ್ಥಗೊಂಡಿದ್ದ ಶ್ವೇತಾ ಶೆಟ್ಟಿ ಎಂಕಾಮ್ ಪೂರ್ಣಗೊಳಿಸಿ, ಬಾಗಲಕೋಟೆಯ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದಳು. ವಿಠ್ಠಲ ಅವರ ಅಣ್ಣನ ಮಗಳು ಅಂಜಲಿ ನರಗುಂದದಲ್ಲಿ ಗ್ರಾಮ ಲೆಕ್ಕಿಗರಾಗಿ ಕೆಲಸ ಮಾಡುತ್ತಿದ್ದರು.

ಅಪಘಾತದಿಂದಾಗಿ ಕಿರೇಸೂರ ಬಳಿ ಅರ್ಧಗಂಟೆಗೂ ಹೆಚ್ಚು ಸಮಯ ವಾಹನ ದಟ್ಟಣೆಯುಂಟಾಗಿತ್ತು. ಸ್ಥಳಕ್ಕೆ ತೆರಳಿದ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು, ಕಾರನ್ನು ಜೆಸಿಬಿ ಸಹಾಯದಿಂದ ರಸ್ತೆ ಪಕ್ಕಕ್ಕೆ ಸರಿಸಿದ್ದಾರೆ. ಲಾರಿ ಚಾಲಕ ಪರಾರಿಯಾಗಿದ್ದಾನೆ.

ಹುಬ್ಬಳ್ಳಿಯ ಕೆಎಂಸಿಆರ್​ಐ ಶವಾಗಾರದಲ್ಲಿ ಮೃತರ ಸಹೋದ್ಯೋಗಿಗಳು, ಸಂಬಂಧಿಕರು ಸೇರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net