ಐದು ಕಿಲೋ ಚಿನ್ನ ವಶ, ಇಬ್ಬರ ಬಂಧನ

gold
Published on

ಕಾಸರಗೋಡು: ಕೋಯಿಕ್ಕೋಡ್ ಕರಿಪ್ಪೂರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಂಸ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಐದು ಕಿಲೋ ಚಿನ್ನ ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಖಾಸಗಿ ವಿಮಾನ ಕಂಪನಿಯ ಇಬ್ಬರು ಸಿಬ್ಬಂದಿಯನ್ನು ಬಂಧಿಸಿದ್ದಾರೆ. ಚಿನ್ನ ತಂದಿದ್ದಾತ ಪರಾರಿಯಾಗಿದ್ದಾನೆ.

ಇಂಡಿಗೋ ವಿಮಾನ ಸಂಸ್ಥೆಯ ಸೀನಿಯರ್ ಎಕ್ಸಿಕ್ಯೂಟಿವ್ ಸಾಜಿದ್ ರಹಮಾನ್ ಮತ್ತು ಕ್ಲಸ್ಟರ್ ಸರ್ವೀಸ್ ಏಜೆಂಟ್ ಮಹಮ್ಮದ್ ಸಾಮಿಲ್ ಬಂಧಿತರು. ವಿಮಾನ ಪ್ರಯಾಣಿಕ, ವಯನಾಡು ನಿವಾಸಿ, ಅನ್ವರ್‌ಆಲಿ ಎಂಬಾತ ಪರಾರಿಯಾದವ.
ದುಬೈಯಿಂದ ಕರಿಪ್ಪೂರ್ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನದಲ್ಲಿ ಬಂದಿಳಿದ ಅನ್ವರ್‌ಆಲಿ, ವಿಮಾನ ನಿಲ್ದಾಣ ಸಿಬ್ಬಂದಿಗೆ ಚಿನ್ನ ಒಳಗೊಂಡ ಬ್ಯಾಗನ್ನು ಹಸ್ತಾಂತರಿಸಿದ್ದನು. ಈ ಬ್ಯಾಗನ್ನು ನಿಲ್ದಾಣದಿಂದ ಹೊರಸಾಗಿಸಲು ಇಬ್ಬರೂ ಸಿಬ್ಬಂದಿ ಯತ್ನಿಸುತ್ತಿದ್ದಂತೆ ಕಸ್ಟಂಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.

ಬ್ಯಾಗನ್ನು ಸ್ಕಾೃನರ್ ಮೂಲಕ ತಪಾಸಣೆ ನಡೆಸಿದಾಗ ಒಳಗೆ ಚಿನ್ನವಿರುವುದು ಗಮನಕ್ಕೆ ಬಂದಿತ್ತು. ತೆರೆದುನೋಡಿದಾಗ ಐದು ಕಿಲೋ ಚಿನ್ನ ಪತ್ತೆಯಾಗಿದೆ. ಈ ಹಿಂದೆಯೂ ಇವರು ಚಿನ್ನ ಸಾಗಾಟದಾರರಿಗೆ ನೆರವಾಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಲಾಗಿದ್ದು, ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net