ಐವರು ಅಂತಾರಾಜ್ಯ ಕಳ್ಳರ ಬಂಧನ

h5-jewelerry
Published on

ಹುಬ್ಬಳ್ಳಿ: ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ರಮೇಶ ಭವನದ ಎದುರಿನ ಭುವನೇಶ್ವರಿ ಜುವೆಲರ್ಸ್ ಅಂಗಡಿ ಕಳ್ಳತನ ಪ್ರಕರಣದಲ್ಲಿ ಐವರು ಅಂತಾರಾಜ್ಯ ಕಳ್ಳರನ್ನು ಬಂಧಿಸಿದ್ದು, ಅವರಿಂದ 77 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣ, 10 ಸಾವಿರ ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ ಕಾರು, ಗ್ಯಾಸ್ ಕಟರ್ ವಶಕ್ಕೆ ಪಡೆಯಲಾಗಿದೆ ಎಂದು ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳ್ಳತನ ಪ್ರಕರಣದಲ್ಲಿ ಮುಂಬೈ ಮೂಲದ ಫರ್ಹಾನ್ ಶೇಖ್, ಮುಖೇಶ ಅಲಿಯಾಸ್ ರಾಜು ಯಾದವ್, ಫಾತಿಮಾ ಶೇಖ್, ಅಫ್ತಾಬ್ ಅಹ್ಮದ್ ಶೇಖ್, ತಲತ್ ಶೇಖ್ ಎಂಬುವರನ್ನು ಬಂಧಿಸಲಾಗಿದೆ. ಬಂಧಿತರಿಂದ 55 ಲಕ್ಷ ರೂ. ಮೌಲ್ಯದ 780 ಗ್ರಾಂ ಮೌಲ್ಯದ ಚಿನ್ನಾಭರಣ, 17 ಲಕ್ಷ ರೂ. ಮೌಲ್ಯದ 23.3 ಕೆಜಿ ಬೆಳ್ಳಿ ಆಭರಣ, 10 ಸಾವಿರ ರೂ. ನಗದು ಹಾಗೂ ಕಳ್ಳತನಕ್ಕೆ ಬಳಸಿದ್ದ 5 ಲಕ್ಷ ರೂ. ಮೌಲ್ಯದ ಕಾರ್ ಜಪ್ತಿ ಮಾಡಲಾಗಿದೆ. ಫರ್ಹಾನ್ ಶೇಖ್ ಮೇಲೆ 15, ಫಾತಿಮಾ ಶೇಖ್ ಮೇಲೆ 2 ಪ್ರಕರಣ ಸೇರಿ ಆರೋಪಿಗಳ ಮೇಲೆ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಇನ್ನೂ ಮೂರ‌್ನಾಲ್ಕು ಪ್ರಮುಖ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದರು.
ಪ್ರಕರಣ ಬೇಧಿಸಲು ಕೇಶ್ವಾಪುರ ಪೊಲೀಸ್ ಠಾಣೆ, ಗೋಕುಲ್ ರೋಡ್, ಕಸಬಾಪೇಟೆ ಹಾಗೂ ಕಮರಿಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ನೇತೃತ್ವದಲ್ಲಿ ಮೂರು ತಂಡ ರಚಿಸಲಾಗಿತ್ತು. ಸಿಸಿ ಟಿವಿ, ಆರೋಪಿಗಳ ಚಲನವಲನ ಹಾಗೂ ಮಾಹಿತಿ ಕಲೆ ಹಾಕಿ 20 ದಿನಗಳ ಕಾಲ ಮುಂಬೈ ನಗರದಲ್ಲಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.
ಬಂಗಾರದ ಅಂಗಡಿ ಮಾಲೀಕರು, ತಮ್ಮ ಅಂಗಡಿಗಳಲ್ಲಿನ ಆಭರಣ ಹಾಗೂ ಅಂಗಡಿ ಸುರಕ್ಷತೆಗಾಗಿ ವಿವಿಧ ತಂತ್ರಜ್ಞಾನ ಹಾಗೂ ಲಾಕರ್‌ಗಳನ್ನು ಅಳವಡಿಸಿಕೊಳ್ಳಬೇಕು. ಅನುಮಾನಸ್ಪದ ವ್ಯಕ್ತಿಗಳು ಕಂಡುಬಂದರೆ ಕೂಡಲೇ ಆಯಾ ಠಾಣೆ ವ್ಯಾಪ್ತಿಯಲ್ಲಿ ಮಾಹಿತಿ ಕೊಡಬೇಕು ಎಂದರು.
ಡಿಸಿಪಿಗಳಾದ ಮಹಾನಿಂಗ ನಂದಗಾವಿ, ಸಿ.ಆರ್. ರವೀಶ, ಎಸಿಪಿಗಳಾದ ಉಮೇಶ ಚಿಕ್ಕಮಠ, ಶಿವಪ್ರಕಾಶ ನಾಯಕ್, ಪಿಐಗಳಾದ ಕೆ.ಎಸ್. ಹಟ್ಟಿ, ಪ್ರವೀಣ ನೀಲಮ್ಮನವರ, ಮಹಾಂತೇಶ ಹೂಳಿ ಸೇರಿದಂತೆ ಇತರ ಪೊಲೀಸ್ ಸಿಬ್ಬಂದಿ ಇದ್ದರು.
ಜುಲೈ ತಿಂಗಳಲ್ಲಿ 1680 ಗ್ರಾಂ ಬಂಗಾರ, 51 ಕೆಜಿ ಬೆಳ್ಳಿ ಹಾಗೂ ನಗದು ಕಳ್ಳತನವಾಗಿತ್ತು. ಈ ಪ್ರಕರಣದಲ್ಲಿ ಪೊಲೀಸರು ಉತ್ತಮ ಕಾರ್ಯ ಮಾಡಿದ್ದಾರೆ. ಮುಂಬೈ ಸೇರಿದಂತೆ ವಿವಿಧೆಡೆ ಐವರನ್ನು ಬಂಧಿಸಿ, ಆಭರಣ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ನಮಗೆ ಸಂತೋಷವಾಗಿದೆ.
-ಜಗದೀಶ ದೈವಜ್ಞ, ಜುವೆಲರಿ ಅಂಗಡಿ ಮಾಲೀಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net