

ಕಂಪ್ಲಿ: ಕೊಳಗೇರಿ ಪ್ರದೇಶದ ಜನತೆಗೆ ವಸತಿ ಹಕ್ಕುಪತ್ರ ವಿತರಿಸಿದ್ದು ಮುಂದಿನ ದಿನಗಳಲ್ಲಿ ಮನೆ ನಿರ್ಮಿಸಿಕೊಡಲಾಗುವುದು ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.
ಇಲ್ಲಿನ ಚಪ್ಪರದಹಳ್ಳಿ, ಎಸ್ಸಿ ಕಾಲನಿಗಳಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ, ಬಳ್ಳಾರಿಯ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ(ಕೆಎಸ್‌ಡಿಬಿ)ಯಿಂದ ಹಕ್ಕುಪತ್ರ ಶನಿವಾರ ವಿತರಿಸಿ ಮಾತನಾಡಿದರು.
100 ಹಾಸಿಗೆ ಆಸ್ಪತ್ರೆ ನಿರ್ಮಾಣ ಹಂತದಲ್ಲಿದ್ದು 45 ಕೋಟಿ ರೂ. ಪೀಠೋಪಕರಣ, ಚಿಕಿತ್ಸಾ ಯಂತ್ರೋಪಕರಣಗಳನ್ನು ಒದಗಿಸಲಾಗುವುದು. ನ್ಯಾಯಾಲಯಕ್ಕೆ ಕಟ್ಟಡ ನಿರ್ಮಿಸಲಾಗುವುದು. ತುಂಗಭದ್ರಾ ನದಿಗೆ ಹೊಸ ಸೇತುವೆ ನಿರ್ಮಿಸಲಾಗುವುದು ಎಂದ ಅವರು, ಸರ್ಕಾರದ ಐದು ಗ್ಯಾರಂಟಿಗಳು ಜನರಿಗೆ ವರದಾನವಾಗಿದ್ದು, ವ್ಯರ್ಥ ಎನ್ನುವ ಪ್ರತಿಪಕ್ಷಗಳ ಟೀಕೆಯಲ್ಲಿ ಹುರುಳಿಲ್ಲ ಎಂದರು.
ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ಮಾತನಾಡಿ, ಕೊಳಗೇರಿ ಪ್ರದೇಶದ ಜನತೆಗೆ ಹಕ್ಕುಪತ್ರ ವಿತರಿಸಿದ್ದರಿಂದ ಸರ್ಕಾರಿ ಸೌಲಭ್ಯ, ವಸತಿ ಸೌಕರ್ಯಪಡೆಯಲು ಅನುಕೂಲವಾಗುತ್ತದೆ ಎಂದರು.
ಕೆಎಸ್‌ಡಿಬಿ ಎಇಇ ವಿ.ತಿಮ್ಮಣ್ಣ ಮಾತನಾಡಿ ಚಪ್ಪರದಳ್ಳಿ, ಎಸ್ಸಿ ಕಾಲನಿಯಲ್ಲಿ 370 ಕುಟುಂಬಗಳಿದ್ದು ದಾಖಲಾತಿಯೊಂದಿಗೆ ಶುಲ್ಕ ಪಾವತಿಸಿದ 240 ಹಕ್ಕುಪತ್ರ ವಿತರಿಸಿದ್ದು, ಉಳಿದ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದರು.
ಪುರಸಭೆ ಸದಸ್ಯರಾದ ಕೆ.ಎಸ್.ಚಾಂದ್‌ಬಾಷಾ, ವಿ.ನಾಗಮ್ಮ ಸತ್ಯಪ್ಪ, ಲಡ್ಡು ಹೊನ್ನೂರವಲಿ, ಪ್ರಮುಖರಾದ ಜಿ.ಸುಧಾಕರ, ಎನ್.ಹಬೀಬ್ ರೆಹಮಾನ್, ಎಂ.ಸುಧೀರ್, ಡೆಕೋರೇಟರ್ ನಾಗರಾಜ, ಅತಾವುಲ್ಲಾ ರೆಹಮಾನ್, ಕೆ.ಮನೋಹರ, ವಾಲ್ಮೀಕಿ ರಘು, ಅಬ್ದುಲ್‌ವಾಹೀದ್, ಎಂ.ಸಿ.ಮಾಯಪ್ಪ, ಬಿ.ಸಿದ್ದಪ್ಪ, ಆರ್.ಪಿ.ಶಶಿಕುಮಾರ್, ಎಇ ಪ್ರಕಾಶ ಇತರರಿದ್ದರು.