

ಸವಣೂರ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಿಂದ ಬಡ ಕುಟುಂಬಗಳಿಗೆ, ಸಾಮಾನ್ಯ ಜನರಿಗೆ ಅನುಕೂಲವಾಗಿದೆ. ಆದ್ದರಿಂದ ಮಹಿಳೆಯರು ತಮ್ಮ ಮನೆ ನಿರ್ವಹಣೆ ಜೊತೆಗೆ ಪುಣ್ಯ ಕ್ಷೇತ್ರಗಳ ದರ್ಶನ ಮಾಡುತ್ತಿದ್ದಾರೆ ಎಂದು ಶಾಸಕ ಯಾಸೀರಅಹ್ಮದಖಾನ್ ಪಠಾಣ ಹೇಳಿದರು.
ಪಟ್ಟಣದ ಚನ್ನಬಸವೇಶ್ವರ ಮಂಗಲ ಭವನದಲ್ಲಿ ತಾಲೂಕು ಆಡಳಿತ, ತಾಪಂ, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಹಯೋಗದಲ್ಲಿ ಏರ್ಪಡಿಸಿದ್ದ ಗ್ಯಾರಂಟಿ ಯೋಜನೆಗಳ ಪ್ರಜಾಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದಲ್ಲಿ ಮಹಿಳೆಯರಿಗೆ ಇರುವಷ್ಟು ಗೌರವ ಪ್ರಪಂಚದಲ್ಲಿ ಎಲ್ಲಿಯೂ ಇಲ್ಲ. ಅದರಂತೆ ಸ್ತ್ರೀಯರನ್ನು ಗೌರವಿಸುವ ಪಕ್ಷ ಕಾಂಗ್ರೆಸ್. ರಾಜ್ಯ ಸರ್ಕಾರ 2 ವರ್ಷದಲ್ಲಿ ತಾಲೂಕಿನ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಡಿ 550 ಕೋಟಿ ರೂ. ಜಮೆ ಮಾಡಿದೆ. ಇದು ಸಾವಿರಾರು ಕುಟುಂಬಗಳ ನಿರ್ವಹಣೆಗೆ, ಗ್ರಾಮದೇವತೆಗೆ ಚಿನ್ನದ ಒಡವೆ ಮಾಡಿಸಿದ್ದಕ್ಕೆ ಸಾಕ್ಷಿಯಾಗಿದೆ. ಕೇಂದ್ರ ಸರ್ಕಾರ ರಾಜ್ಯದಿಂದ 5 ಲಕ್ಷ ಕೋಟಿ ಜಿಎಸ್ಟಿ ಸಂಗ್ರಹ ಮಾಡುತ್ತಿದೆ. ಕೇಂದ್ರ ಸರ್ಕಾರ ದೇಶದ ಪುಣ್ಯಕ್ಷೇತ್ರಗಳ ದರ್ಶನಕ್ಕೆ ಉಚಿತ ರೈಲ್ವೆ ಪ್ರಯಾಣ ಘೊಷಣೆ ಮಾಡಲಿ ಎಂದರು.
ಸವಣೂರ, ಶಿಗ್ಗಾಂವಿ, ಬಂಕಾಪುರ ಪಟ್ಟಣಗಳಿಗೆ ಶಾಶ್ವತ ನೀರು ಪೂರೈಕೆ ಯೋಜನೆಗೆ 361 ಕೋಟಿ ರೂ., ಎಂಪಿ ಮಾದರಿಯ ಸವಣೂರ ಏತ ನೀರಾವರಿಗೆ 350 ಕೋಟಿ ರೂ., ಶಾಲೆ, ರಸ್ತೆ, ದೇವಸ್ಥಾನ ಅಭಿವೃದ್ಧಿಗೆ ನೂರಾರು ಕೋಟಿ ರೂ. ಸೇರಿ ಕ್ಷೇತ್ರಕ್ಕೆ 1 ಸಾವಿರ ಕೋಟಿ ಅನುದಾನ ಸರ್ಕಾರ ನೀಡುತ್ತಿದೆ ಎಂದರು.
ಹೆಸ್ಕಾಂ ಅಧ್ಯಕ್ಷ ಅಜೀಮಪೀರ್ ಖಾದ್ರಿ ಮಾತನಾಡಿ, ಹೆಸ್ಕಾಂನಿಂದ 38 ಸಾವಿರ ರೈತರಿಗೆ ಉಚಿತವಾಗಿ ಟಿಸಿ ನೀಡಲು ಮುಂದಾಗಿದ್ದೇವೆ. ಮುಂಬರುವ ದಿನಗಳಲ್ಲಿ 50 ಸಾವಿರ ಟಿಸಿ ನೀಡಲು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದರು.
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಸುಭಾಸ ಮಜ್ಜಗಿ ಅಧ್ಯಕ್ಷತೆ ವಹಿಸಿದ್ದರು. ತಾಪಂ ಇಒ ಬಿ.ಎಸ್. ಶಿಡೇನೂರ ಮಾತನಾಡಿದರು. ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ, ಉಪಾಧ್ಯಕ್ಷರಾದ ಗುಡ್ಡಪ್ಪ ಜಲದಿ, ನಾಗಪ್ಪ ತಿಪ್ಪಕ್ಕನವರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ಮುಲ್ಲಾ, ಕೆಡಿಪಿ ಸದಸ್ಯ ರವಿ ಕರಿಗಾರ, ಗ್ಯಾರಂಟಿ ಯೋಜನೆಯ ಸದಸ್ಯರಾದ ಗುರಪ್ಪ ಅಕ್ಕಿ, ಚಂದ್ರಶೇಖರ ಹಟ್ಟಿ, ನೂರಅಹ್ಮದ ಮತ್ತೆಸಾಬನವರ, ಪರಶುರಾಮ ಜುಂಬಣ್ಣನವರ, ಹನುಮಂತಪ್ಪ ಹಳ್ಳಿ, ಇಬ್ರಾಹಿಂಸಾಬ ಕರ್ಜಗಿ, ಪುಟ್ಟಪ್ಪ ಮರಗಿ, ಜ್ಯೋತಿಕಿರಣ ಕುಲಕರ್ಣಿ, ಹನುಮಂತಗೌಡ ಉಳ್ಳಾಗಡ್ಡಿ, ಅಶೋಕ ನೆಲ್ಲೂರ, ನಾಗಪ್ಪ ತಿಮ್ಮಾಪೂರ, ರಮಾಕಾಂತ ಶೆಂಡಿಗೆ, ಶಂಕರ ಲಮಾಣಿ, ಗಿರೀಶ ತಳವಾರ, ಸಿಡಿಪಿಒ ಉಮಾ ಕೆ.ಎಸ್., ಆಹಾರ ನಿರೀಕ್ಷಕ ಡಿ.ಎಂ. ಪಾಟೀಲ, ಹೆಸ್ಕಾಂ ಉಪ ವಿಭಾಗಾದ ಎಇಇ ದೇವರಾಜ ಅವರೆಡ್ಡಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು, ಮಹಿಳೆಯರು, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.