ಪಂಚ ಗ್ಯಾರಂಟಿ ನಿಂದನೆ ಪೋಸ್ಟ್ :ಶಿಕ್ಷಕನ ಅಮಾನತಿಗೆ ಆಗ್ರಹಿಸಿ ಬಿಇಒಗೆ ದೂರು

Published on

ಪುತ್ತೂರು ಗ್ರಾಮಾಂತರ: ಸಾಮಾಜಿಕ ಜಾಲತಾಣದಲ್ಲಿ ಪಂಚ ಗ್ಯಾರಂಟಿ ವಿರುದ್ಧ ನಿಂದನೆಯ ಪೋಸ್ಟ್ ಹಾಕಿರುವ ಪಾಪೆಮಜಲು ಸರ್ಕಾರಿ ಪ್ರೌಢಶಾಲೆ ಶಿಕ್ಷಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕೆಪಿಸಿಸಿ ಸದಸ್ಯ ಕಾವು ಹೇಮನಾಥ ಶೆಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಿದ್ದಾರೆ.

ಅರಿಯಡ್ಕ ಗ್ರಾಮದ ಪಾಪೆಮಜಲು ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಹರಿಪ್ರಸಾದ್ ಕೊಂಗಾಜೆ ಗೃಹಲಕ್ಷ್ಮೀ ಹಣ ಕೂಡಿಟ್ಟು ಹೊಸ ಫೋನ್ ತೆಗೆದುಕೊಂಡರು, ಊರಿಗೆ ಹೋಳಿಗೆ ಊಟ ಹಾಕಿಸಿದರು, ಲೈಬ್ರರಿ ಮಾಡಿಕೊಟ್ಟರು, ಸೊಸೆಗೆ ಅಂಗಡಿ ಇಟ್ಟು ಕೊಟ್ಟರು, ಫ್ರೀ ಬಸ್ಸಿನಲ್ಲಿ ಊರೂರು ತಿರುಗಿ ದೇವರ ದರ್ಶನ ಮಾಡಿ ಬಂದರು. ಆದರೆ ಮರಳಿ ಮನೆಗೆ ಬಂದಾಗ ಗಂಡನ ಹೆಸರಿನಲ್ಲಿದ್ದ ಜಮೀನು ಜಮೀರ್ ಪಾಲಾಗಿತ್ತು ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು ಎಂಬುವುದು ಆರೋಪ.

ಒಬ್ಬ ಶಿಕ್ಷಕನಾಗಿ ಸಾಮಾಜಿಕ ಜಾಲತಾಣದಲ್ಲಿ ಸರ್ಕಾರವನ್ನು ಟೀಕಿಸುವುದು ಅಕ್ಷಮ್ಯ ಅಪರಾಧವಾಗಿದೆ. ಸರ್ಕಾರದಿಂದ ಸಂಬಳ ಪಡೆದು ಅದೇ ಸರ್ಕಾರದ ವಿರುದ್ಧ ಮಾತನಾಡುವ ಸರ್ಕಾರಿ ನೌಕರ ಆ ಹುದ್ದೆಯಲ್ಲಿ ಮುಂದುವರಿಯಲು ಅರ್ಹನಲ್ಲ. ಹಾಗಾಗಿ ಹರಿಪ್ರಸಾದ್ ಅವರನ್ನು ಸಸ್ಪೆಂಡ್ ಮಾಡಬೇಕು ಎಂದು ಹೇಮನಾಥ ಶೆಟ್ಟಿ ದೂರಿನಲ್ಲಿ ಆಗ್ರಹಿಸಿದ್ದಾರೆ.

ಸರ್ಕಾರಿ ನೌಕರರು ಶಾಸಕ, ಸಂಸದ, ಸಚಿವರ, ಮುಖ್ಯಮಂತ್ರಿ, ಪ್ರಧಾನಮಂತ್ರಿಯನ್ನು ಟೀಕಿಸುವುದು ಖಂಡನೀಯ. ಕೃತ್ಯ ಎಸಗಿರುವ ಶಿಕ್ಷಕನನ್ನು ಅಮಾನತು ಮಾಡಬೇಕು. ಇಲ್ಲವಾದರೆ ಸರ್ಕಾರದ ಉನ್ನತ ಅಧಿಕಾರಿಗಳ ಗಮನಕ್ಕೆ ಈ ವಿಚಾರ ತಂದು ಕ್ರಮ ಕೈಗೊಳ್ಳಲಾಗುವುದು ಎಂದು ಹೇಮನಾಥ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net