ಐದು ಗ್ಯಾರಂಟಿಗಳಿಂದ ಅನುಕೂಲ

LAKSHMI
ಸಿಂಧನೂರಿನ ಟೌನ್‌ಹಾಲ್‌ನಲ್ಲಿ ಗೃಹಲಕ್ಷ್ಮೀ ಯೋಜನೆಯನ್ನು ಶಾಸಕ ಹಂಪನಗೌಡ ಬಾದರ್ಲಿ ಉದ್ಘಾಟಿಸಿದರು. ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ತಹಸೀಲ್ದಾರ್ ಅರುಣ್ ದೇಸಾಯಿ, ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಶ್ರೀದೇವಿ ಶ್ರೀನಿವಾಸ ಮಾತನಾಡಿದರು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಲಕ್ಷ್ಮೀ ಭಂಗಿ ಇತರರಿದ್ದರು.
Published on

ಸಿಂಧನೂರು: ಗೃಹಲಕ್ಷ್ಮೀ ಯೋಜನೆ ಅನುಷ್ಠಾನ ಮೂಲಕ ಮಹಿಳಾ ಆರ್ಥಿಕ ಸಬಲೀಕರಣದತ್ತ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

ನಗರದ ಟೌನ್‌ಹಾಲ್‌ನಲ್ಲಿ ಬುಧವಾರ ತಾಲೂಕು ಆಡಳಿತ, ತಾಪಂ, ನಗರಸಭೆ ಹಾಗೂ ಶಿಶು ಅಭಿವೃದ್ಧಿ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ತಾಲೂಕು ಇಂದಿರಾಗಾಂಧಿ ಸ್ತ್ರೀಶಕ್ತಿ ಒಕ್ಕೂಟದಿಂದ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

ಯೋಜನೆಗೆ ಚಾಲನೆ

ಕುಟುಂಬ ನಿರ್ವಹಣೆಯಲ್ಲಿ ಯಜಮಾನಿಯ ಪಾತ್ರ ಪ್ರಮುಖವಾಗಿದ್ದು, ಆಕೆ ಆರ್ಥಿಕವಾಗಿ ಸಬಲಳಾದಲ್ಲಿ ಕುಟುಂಬ ನಿರ್ವಹಣೆ ಉತ್ತಮವಾಗಿರಲಿದೆ. ಆದ್ದರಿಂದ ರಾಜ್ಯ ಸರ್ಕಾರ ಮನೆ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂ. ನೀಡುವ ಗೃಹಲಕ್ಷ್ಮೀ ಯೋಜನೆ ಅತ್ಯುಪಯುಕ್ತವಾಗಿದೆ. ಮಹಿಳೆಯರಿಗೆ ಆರ್ಥಿಕವಾಗಿ ಸಹಾಯ ಮಾಡುವ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿಸಲು ಮುಂದಾಗಿರುವುದು ಶ್ಲಾಘನೀಯ. ಐದು ಗ್ಯಾರಂಟಿಗಳು ಎಲ್ಲ ವರ್ಗದ ಜನರಿಗೆ ಅನುಕೂಲವಾಗಲಿದೆ ಎಂದರು.

ತಹಸೀಲ್ದಾರ್ ಅರುಣ್ ದೇಸಾಯಿ ಮಾತನಾಡಿ, ತಾಲೂಕಿನಲ್ಲಿ ಗೃಹಲಕ್ಷ್ಮೀ ಅರ್ಹ ಫಲಾನುಭವಿಗಳು 78,424 ಕುಟುಂಬಗಳ ಪೈಕಿ 67,630 ಫಲಾನುಭವಿಗಳು ಅರ್ಜಿ ಸಲ್ಲಿದ್ದಾರೆ. ಶೇ.86 ರಷ್ಟು ಸಾಧನೆ ಮಾಡಿದ್ದಿದೆ. ಇನ್ನೂ 10,794 ಮಹಿಳೆಯರು ನೋಂದಣಿಯಾಗಬೇಕಿದೆ. ಬಾಪೂಜಿ ಸೇವಾ ಕೇಂದ್ರದಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದರು.

ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ ಮಾತನಾಡಿ, ಯಾವುದೇ ಸರ್ಕಾರ ಇರಲಿ, ಜನಪರ ಯೋಜನೆಗಳನ್ನು ಸಮರ್ಪಕ ಅನುಷ್ಠಾನವಾಗಬೇಕು. ಇವತ್ತು ಮಹಿಳೆಯರಿಗೆ ಡಬಲ್ ಧಮಕ ಸಿಕ್ಕಿದ್ದು ಕೇಂದ್ರ ಸರ್ಕಾರ ಕೂಡ ಅಡುಗೆ ಅನಿಲಕ್ಕೆ 200 ಬೆಲೆ ಕಡಿಮೆ ಮಾಡಿದೆ ಎಂದರು. ತಾಪಂ ಇಒ ಚಂದ್ರಶೇಖರ ಗುಂಜಳ್ಳಿ, ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ಸಿಡಿಪಿಒ ಲಿಂಗನಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net