

ಅರಸೀಕೆರೆ: ನಗರದ 23ನೇ ವಾರ್ಡ್‌ನಲ್ಲಿ ಸ್ವಚ್ಛತಾ ಕೆಲಸಕ್ಕೆ ತೆರಳಿದ್ದ ಐವರು ಮಹಿಳಾ ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆದಿದೆ.
ಮುಜಾವರ್ ಮೊಹಲ್ಲಾ ಬಡಾವಣೆ ನಿವಾಸಿ ಮನ್ಸೂರ್ ಹಾಗೂ ಆತನ ತಾಯಿ ಕೋಲು ಹಾಗೂ ಇತರವಸ್ತು ಬಳಸಿ ಹಲ್ಲೆ ಮಾಡಿದ್ದಾರೆ. ಪರಿಣಾಮ ವೆಂಕಟಟಲಕ್ಷ್ಮೀ, ಕಲಾವತಿ, ಅನುರಾಧಾ, ಲತಾ ಹಾಗೂ ಪಾರ್ವತಮ್ಮ ಅಸ್ವಸ್ಥಗೊಂಡಿದ್ದಾರೆ. ತೀವ್ರ ಆಸ್ವಸ್ಥಗೊಂಡಿದ್ದ ಎಲ್ಲರನ್ನೂ ನಗರದ ಸರ್ಕಾರಿ ಜೆ.ಸಿ.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಎಂದಿನಂತೆ ಸ್ವಚ್ಛತೆಗೆ ತೆರಳಿದ್ದ ಐವರು ಕಸವನ್ನು ಒಂದೆಡೆ ರಾಶಿ ಮಾಡಿದ್ದಾರೆ. ಸ್ಥಳಕ್ಕೆ ಬಂದ ಮನ್ಸೂರ್ ಹಾಗೂ ಆತನ ತಾಯಿ ನಮ್ಮ ಮನೆ ಮುಂದೆ ಹೀಗೆ ಕಸ ಸುರಿದರೆ ಹೇಗೆ. ತಕ್ಷಣವೇ ತೆರವುಗೊಳಿಸಿ ಎಂದು ಏರಿದ ದನಿಯಲ್ಲಿ ಧಮಕಿ ಹಾಕಿದ್ದಾರೆ. ಎಲ್ಲವನ್ನೂ ಸಮಾಧಾನದಿಂದ ಆಲಿಸಿದ ಸಿಬ್ಬಂದಿ ಕಸ ವಿಲೇವಾರಿ ಆಟೋ ಬರಲಿದ್ದು ಯಾರಿಗೂ ತೊಂದರೆಯಾಗದಂತೆ ವಿಲೇವಾರಿ ಮಾಡುತ್ತೇವೆ ಎಂದು ಮನವರಿಕೆ ಮಾಡಿಕೊಡುವ ಪ್ರಯತ್ನ ನಡಸಿದರು. ಇದ್ಯಾವುದಕ್ಕೂ ಕ್ಯಾರೆ ಎನ್ನದ ತಾಯಿ ಮತ್ತು ಮಗ ಪೌರ ಕಾರ್ಮಿಕರ ಮೇಲೆ ಕೋಲಿನಿಂದ ಥಳಿಸಿದ್ದಾರೆ ಎನ್ನಲಾಗಿದೆ.
ವಿಷಯ ತಿಳಿದು ಕೆಲಸ ಸ್ಥಗಿತಗೊಳಿಸಿ ನಗರಸಭೆ ಆವರಣಕ್ಕೆ ದೌಡಾಯಿಸಿದ ಪೌರ ಕಾರ್ಮಿಕರು ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಜರುಗಿಸುವಂತೆ ಪಟ್ಟು ಹಿಡಿದರು. ಕೆಲ ಹೊತ್ತಿನ ಬಳಿಕ ನಗರಠಾಣೆಗೆ ತೆರಳಿ ದೂರು ನೀಡಿದ್ದಾರಲ್ಲದೆ, ಪ್ರಕರಣ ದಾಖಲಿಸಲು ಪಟ್ಟು ಹಿಡಿದರು.
ನಿವಾಸಿಗಳ ಆರೋಗ್ಯ ರಕ್ಷಣೆ ಜತೆಗೆ ಶುಚಿತ್ವ ಕಾಪಾಡುತ್ತಿರುವ ಪೌರ ಕಾರ್ಮಿಕರ ಮೇಲೆ ಪದೇ ಪದೆ ಹಲ್ಲೆ ನಡೆಯುತ್ತಿರುವುದು ಖಂಡನೀಯ. ಐವರು ಮಹಿಳಾ ಪೌರ ಕಾರ್ಮಿಕರ ಮೇಲೆ ದೌರ್ಜನ್ಯ ನಡೆಸಿರುವ ಮನ್ಸೂರ್ ಹಾಗೂ ಆತನ ತಾಯಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಮುಂಬರುವ ದಿನಗಳಲ್ಲಿ ಇಂತಹ ಕೃತ್ಯಗಳು ಮರುಕಳಿಸದಂತೆ ಪೌರಾಯುಕ್ತರು ಕ್ರಮ ವಹಿಸಬೇಕು. ಪೊಲೀಸರು ಹಲ್ಲೆ ನಡೆಸಿದ ವ್ಯಕ್ತಿಗಳನ್ನು ಕೂಡಲೇ ಬಂಧಿಸಬೇಕು.
ಎ.ಎಲ್.ಭಾಸ್ಕರ್ ನಗರಸಭೆ ಸದಸ್ಯ, ಅರಸೀಕೆರೆ