

ಬೆಂಗಳೂರು: ರಾಜ್ಯಾದ್ಯಂತ ಮಾನ್ಸೂನ್ ವ್ಯಾಪಿಸಿದ ಬೆನ್ನಲ್ಲೇ ಮುಂದಿನ 4 ದಿನ ಅತಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ.
ಬೆಳಗಾವಿ, ಉತ್ತರ ಕನ್ನಡದ ಕುಮಟಾದಲ್ಲಿ 100 ಮಿಮೀಗಿಂತ ಅಧಿಕ ಮಳೆಯಾಗಿದೆ. ಮಂಡ್ಯ, ಚಿಕ್ಕಮಗಳೂರು, ಚಿತ್ರದುರ್ಗ,ಚಾಮರಾಜನಗರ, ಬೀದರ್, ಬೆಂಗಳೂರು, ಬೆಂ.ಗ್ರಾಮಾಂತರ, ಹಾಸನ, ಧಾರಾವಾಡ, ದಾವಣಗೆರೆ ಸೇರಿ ರಾಜ್ಯದ ಅನೇಕ ಭಾಗಗಳಲ್ಲಿ ಶುಕ್ರವಾರ ಭರ್ಜರಿ ಮಳೆಯಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಹಾವೇರಿಯಲ್ಲಿ ಜೂ 8ರಿಂದ ಜೂ 10ರವರೆಗೆ ಭಾರಿ ಮಳೆ ಸುರಿಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಇಲಾಖೆ ಆರೆಂಜ್ ಅರ್ಲಟ್ ಇರಲಿದೆ. ಈ ವೇಳೆ 115 ಮಿಮೀನಿಂದ 204 ಮಿಮೀವರೆಗೆ ಮಳೆಯಾಗಲಿದೆ.
ಬಾಗಲಕೋಟೆ, ಗದಗ, ಕಲಬುರಗಿ, ಕೊಪ್ಪಳ, ವಿಜಯಪುರ, ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರಿನಲ್ಲಿ ಮುಂದಿನ ಮೂರು ದಿನ ಹಾಗೂ ತುಮಕೂರು, ದಾವಣಗೆರೆ, ಚಿತ್ರದುರ್ಗ, ಯಾದಗಿರಿ, ರಾಯಚೂರಿನಲ್ಲಿ ಮುಂದಿನ 24 ಗಂಟೆ ಯೆಲ್ಲೋ ಅರ್ಲಟ್ ಇರಲಿದೆ. ಉಳಿದೆಡೆ ಗುಡುಗು ಮಿಂಚು ಸಹಿತ ಸಾಧಾರಣ ಪ್ರಮಾಣದಲ್ಲಿ ವರ್ಷಧಾರೆಯಾಗಲಿದೆ.
ದಕ್ಷಿಣ ಕರ್ನಾಟಕಗಿಂತ ಉತ್ತರ ಕರ್ನಾಟಕದ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಭಾರಿ ಮಳೆ ಬೀಳಲಿದೆ. ದಕ್ಷಿಣ ಕರ್ನಾಟಕ ಕೆಲವೆಡೆ ಮಾತ್ರ ಬಿರುಸಾಗಿ ಮಳೆಯಾಗಲಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಬಿರುಗಾಳಿ ಜಾಸ್ತಿ ಇರಲಿದೆ. ಗಂಟೆಗೆ 40-50 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ಎತ್ತರದ ಅಲೆಗಳು ಇರುವ ಕಾರಣದಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಇಲಾಖೆ ಮುನ್ನಚ್ಚರಿಕೆ ಕೊಟ್ಟಿದೆ.