ಬಳ್ಳಾರಿ : ಜಿಲ್ಲೆಯಲ್ಲಿ ಚಿಲ್ಲಿ ಮಾರುಕಟ್ಟೆ ನಿರ್ಮಾಣಕ್ಕೆ ಎಪಿಎಂಸಿಯಿಂದ ಐದು ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್.ಪಾಟೀಲ್ ಭರವಸೆ ನೀಡಿದರು.
ಇಲ್ಲಿನ ಬಿಡಿಸಿಸಿ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.
ಅತಿ ಹೆಚ್ಚು ಮೆಣಸಿನಕಾಯಿ ಬೆಳೆಯುತ್ತಿರುವ ಬಜಿಲ್ಲೆಯಲ್ಲಿ ಚಿಲ್ಲಿ ಮಾರುಕಟ್ಟೆ ನಿರ್ಮಾಣ ಮಾಡಬೇಕು ಎಂಬ ಬೇಡಿಕೆ ಇದೆ. ಹೀಗಾಗಿ ಕೋಲ್ಡ್ ಸ್ಟೋರೇಜ್ ಜತೆಗೆ ಚಿಲ್ಲಿ ಮಾರುಕಟ್ಟೆಯನ್ನೂ ನಿರ್ಮಿಸಲಾಗುವುದು. ಇತರ ಮೂಲಗಳಿಂದ ಅಗತ್ಯ ಸಂಪನ್ಮೂಲ ಕ್ರೋಢೀಕರಣ ಜತೆಗೆ ಶಾಸಕ ನಾರಾ ಭರತ್‌ರೆಡ್ಡಿ ಅವರೂ ನೆರವಿನ ಭರವಸೆ ನೀಡಲಿದ್ದಾರೆ ಎಂದರು.
ಈಗ ಚಿಲ್ಲಿ ಮಾರುಕಟ್ಟೆ ನಿರ್ಮಾಣಕ್ಕೆ ಗುರುತಿಸಿರುವ 23 ಎಕರೆ ಪ್ರದೇಶ ಕಡಿಮೆಯಾಗಲಿದೆ. ಭವಿಷ್ಯದ ದೃಷ್ಟಿಯಿಂದ ಕನಿಷ್ಟ 50 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡುವುದು ಸೂಕ್ತ ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ ಎಪಿಎಂಸಿ ಸುಮಾರು 23 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದೆ. ಈ ಆಸ್ತಿಯನ್ನು ಉಳಿಸಿಕೊಳ್ಳುವುದಷ್ಟೇ ಅಲ್ಲ. ಆರ್ಥಿಕವಾಗಿ ಮತ್ತಷ್ಟು ಬಲಶಾಲಿಯಾಗಿ ಮಾಡಬೇಕಿದೆ. ಲಾಭ ಮಾಡುವ ಉದ್ದೇಶ ಅಲ್ಲದಿದ್ದರೂ ಆರ್ಥಿಕವಾಗಿ ಸಬಲ ಇರುವಂತೆ ನೋಡಿಕೊಳ್ಳಬೇಕಿದೆ ಎಂದು ಹೇಳಿದರು.
ಶಾಸಕ ನಾರಾ ಭರತ್‌ರೆಡ್ಡಿ ಮಾತನಾಡಿ, ಚಿಲ್ಲಿ ಮಾರುಕಟ್ಟೆ ನಿರ್ಮಾಣಕ್ಕೆ ಎಪಿಎಂಸಿ ಸಚಿವರೊಂದಿಗೆ ಕೈ ಜೋಡಿಸಲಾಗುವುದು. ಸಂಸ್ಥೆಯ ಇತರ ಬೇಡಿಕೆಗಳ ಈಡೇರಿಕೆಗೂ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.