ಐದು ಕಾಳಜಿ ಕೇಂದ್ರ ಸ್ಥಾಪನೆ

4
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಮಾಂಗೂರ ಕ್ರಾಸ್ ಬಳಿ ನೀರು ನಿಂತಿದ್ದರಿಂದ ವಾಹನಗಳು ಏಕಮುಖವಾಗಿ ಸಂಚರಿಸುತ್ತಿದ್ದವು. ಅಧಿಕಾರಿಗಳು ಕ್ರಮವಹಿಸಿ ಸಂಚಾರಕ್ಕೆ ದಾರಿ ಮಾಡಿಕೊಟ್ಟಿದ್ದಾರೆ.
Published on

ನಿಪ್ಪಾಣಿ: ತಾಲೂಕಿನಾದ್ಯಂತ ಶನಿವಾರ ಮಳೆ ಕೊಂಚ ವಿಶ್ರಾಂತಿ ಪಡೆದಿದ್ದರೂ ಮಹಾರಾಷ್ಟ್ರದ ಡ್ಯಾಂಗಳಿಂದ ನೀರು ಹರಿದು ಬರುತ್ತಿದೆ. ದೂಧಗಂಗಾ, ವೇದಗಂಗಾ ನದಿ ನೀರಿನ ಪ್ರವಾಹ ಏರುತ್ತಲೇ ಇದೆ.

ಪಾಟಗಾಂವ ಜಲಾಶಯ ಶೇ.97, ಭರ್ತಿಯಾಗಿ ವೇದಗಂಗಾ ನದಿಗೆ 200 ಕ್ಯೂಸೆಕ್ಸ್ ನೀರು ಹರಿ ಬಿಡಲಾಗುತ್ತಿದೆ. ಕಾಳಮ್ಮವಾಡಿ ಜಲಾಶಯ ಶೇ.84 ಭರ್ತಿಯಾಗಿದ್ದು, ದೂಧಗಂಗಾ ನದಿಗೆ 5,000 ಕ್ಯೂಸೆಕ್ಸ್ ನೀರು ಹರಿ ಬಿಡಲಾಗುತ್ತಿದೆ. ತಾಲೂಕಿನ ಕುನ್ನೂರ-ಮಾಂಗೂರ, ಕಾರದಗಾ-ಭೋಜ, ಭೋಜವಾಡಿ-ಕುನ್ನೂರ, ಸದಲಗಾ-ಬೋರಗಾಂವ, ಅಕ್ಕೋಳ-ಸಿದ್ನಾಳ, ಜತ್ರಾಟ-ಭಿವಶಿ ಸೇತುವೆಗಳು ಮುಳುಗಡೆಯಾಗಿ ಸಂಚಾರ ಸ್ಥಗಿತಗೊಂಡಿದೆ.

ತಾಲೂಕಿನ ಅಕ್ಕೋಳ ಗ್ರಾಮದ ಕಿಲ್ಲೇದಾರ ತೋಟದ ಮನೆಗಳಿಗೆ ಶನಿವಾರ ವೇದಗಂಗಾ ನದಿ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಈಗಾಗಲೇ ಅಲ್ಲಿಯ 9 ಕುಟುಂಬಗಳ 50ಕ್ಕೂ ಅಧಿಕ ಸದಸ್ಯರು ಸಂಬಂಧಿಗಳ ಮನೆಗೆ ತೆರಳಿದ್ದಾರೆ. ನಿವಾಸಿಗಳ ನೆರವಿಗೆ ಅಧಿಕಾರಿಗಳು ಧಾವಿಸಿಲ್ಲ. ಕಾಳಜಿ ಕೇಂದ್ರ ಎಲ್ಲಿದೆ ಎಂಬುದು ಗೊತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಇಲ್ಲಿಯ ರವಿಂದ್ರ ಕಿಲ್ಲೇದಾರ ಅವರ ಮನೆ ಕುಸಿದು ಬಿದ್ದಿದೆ. ಕಾಳಜಿ ಕೇಂದ್ರಗಳ ಸ್ಥಾಪನೆ: ಸಿದ್ನಾಳ ಗ್ರಾಮದ 46 ಜನ, ಹುನ್ನರಗಿ ಗ್ರಾಮದ 184 ಜನ, ಕುನ್ನೂರ ಗ್ರಾಮದ 135 ಜನ, ಮಮದಾಪುರ ಗ್ರಾಮದ 33 ಜನ, ಬಾರವಾಡ ಗ್ರಾಮದ 29 ಜನ ಸೇರಿ ಒಟ್ಟು 220 ಕುಟುಂಬಗಳ 427 ಜನರನ್ನು ಸ್ಥಳಾಂತರಗೊಂಡಿದ್ದು, 107 ಕುಟುಂಬ ಸದಸ್ಯರು ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net