

ಶಿವಮೊಗ್ಗ: ತಾಲೂಕಿನ ಹಾರನಹಳ್ಳಿ ಕೆರೆ ಬಳಿ ಬುಧವಾರ ತಡರಾತ್ರಿ ದರೋಡೆಗೆ ಹೊಂಚು ಹಾಕುತ್ತಿದ್ದ ಐವರನ್ನು ಕುಂಸಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಳ್ಳಾರಿ ಜಿಲ್ಲೆ ಹರಪನಹಳ್ಳಿಯ ರಸಿಕ, ಆಂಜನಪ್ಪ, ಹನುಮಂತಪ್ಪ, ಧರ್ಮಪ್ಪ, ಸಂತೋಷ್ ಬಂಧಿತರು.
ಒಂಟಿ ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡುವುದಕ್ಕಾಗಿ ಹೊಂಚು ಹಾಕುತ್ತಿದ್ದ ಕುರಿತು ಖಚಿತ ಮಾಹಿತಿ ಮೇಲೆ ದಾಳಿ ನಡೆಸಿದ ಪೊಲೀಸರು ದರೋಡೆಕೋರರ ಎಡೆಮುರಿ ಕಟ್ಟಿದ್ದಾರೆ.
ಬಂಧಿತರು ಬೆಳ್ಳಿ ಬಂಗಾರ ಕಳ್ಳತನ ಮಾಡುವುದರ ಜತೆಗೆ ನಕಲಿ ಬೆಳ್ಳಿ ಬಂಗಾರದ ಆಭರಣಗಳನ್ನು ತೋರಿಸಿ ಜನರಿಗೆ ವಂಚಿಸಿದ್ದರು ಎನ್ನಲಾಗಿದ್ದು ಕಬ್ಬಿಣದ ರಾಡು, ಕಾರದಪುಡಿ, ಗರಗಸವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕುಂಸಿ ಠಾಣೆ ಪಿಎಸ್ಐ ನವೀನ ಮಠಪತಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದೆ.