

ಹುಬ್ಬಳ್ಳಿ: ಶಿರಹಟ್ಟಿಯ ಶ್ರೀ ಫಕೀರ ಸಿದ್ಧರಾಮ ಮಹಾಸ್ವಾಮಿಗಳ ಅಮೃತ ಮಹೋತ್ಸವ (75ನೇ ಜನ್ಮ ದಿನೋತ್ಸವ) ನಿಮಿತ್ತ ಇಲ್ಲಿಯ ನೆಹರು ಮೈದಾನದಲ್ಲಿ ಫೆ. 1ರಂದು ಆನೆಯಂಬಾರಿಯಾರೂಢ ಪೂಜ್ಯರಿಗೆ ಐದೂವರೆ ಟನ್ ನಾಣ್ಯದ ತುಲಾಭಾರ ಸೇವೆ ನಡೆಯಲಿದೆ. ಇದಕ್ಕೂ ಮೊದಲು ಹುಬ್ಬಳ್ಳಿ ಮಹಾನಗರದಲ್ಲಿ 20 ದಿನಗಳವರೆಗೆ ಭಾವೈಕ್ಯತಾ ರಥಯಾತ್ರೆ ಜರುಗಲಿದೆ ಎಂದು ಶಿರಹಟ್ಟಿ ಮಠದ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಭಾವೈಕ್ಯತಾ ಸಂಚಾರಿ ರಥಕ್ಕೆ ಚಾಲನೆ, ಪೂಜ್ಯರ ತುಲಾಭಾರ ಸೇವೆ ನೆರವೇರಿಸುವ ಕುರಿತು ಇಲ್ಲಿಯ ಪೃಥ್ವಿ ಪ್ಯಾರಡೈಸ್ ಹೋಟೆಲ್ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸರ್ವಧರ್ಮ ಮತ್ತು ಸಮಾಜದ ಸಭೆಯಲ್ಲಿ ಅವರು ಮಾತನಾಡಿದರು.
ಅನೇಕ ಸಮಾಜದ, ಧರ್ಮದ ಮುಖಂಡರು ಇದಕ್ಕೆ ಸಾಥ್ ನೀಡುತ್ತಿದ್ದಾರೆ. ಕ್ರಿಶ್ಚಿಯನ್, ಮುಸ್ಲಿಂ, ಸಿಖ್, ಜೈನ್ ಸೇರಿ ಇತರ ಧರ್ಮೀಯರು ಸಹಕರಿಸುತ್ತಿದ್ದಾರೆ. ಮಹಾನಗರದ ನಿಗದಿತ ಪ್ರದೇಶದಲ್ಲಿ ರಥ ಯಾತ್ರೆ ನಡೆಯಲಿದೆ. ನಂತರ ನೆಹರು ಮೈದಾನದಲ್ಲಿ ಪೂಜ್ಯರ ತುಲಾಭಾರ ಸೇವೆ ನಡೆಯಲಿದ್ದು, ಗಿನ್ನೆಸ್ ದಾಖಲೆಯಾಗುವ ಸಾಧ್ಯತೆ ಇದೆ. ಅತಿದೊಡ್ಡ ತಕ್ಕಡಿ ತಯಾರಿಸುವ ಕಾರ್ಯ ಭರದಿಂದ ಸಾಗಿದೆ. ಕಾರ್ಯಕ್ರಮ ಉದ್ಘಾಟನೆಗೆ ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾ ಮೂರ್ತಿ ಅವರನ್ನು ಕರೆಯಿಸಲಾಗುವುದು ಎಂದರು.
ಭಾವೈಕ್ಯತಾ ರಥಯಾತ್ರೆ 8 ಜಿಲ್ಲೆಗಳಲ್ಲಿ ಮುಂದುವರಿಯಲಿದ್ದು, ಮುಂದಿನ ವರ್ಷ ಶಿರಹಟ್ಟಿಯಲ್ಲಿ ಶ್ರೀ ಫಕೀರ ಸಿದ್ಧರಾಮ ಮಹಾಸ್ವಾಮಿಗಳಿಗೆ 63 ಕೆಜಿ ತೂಕದ ಬಂಗಾರದ ತುಲಾಭಾರ ಸೇವೆ ಮಾಡಲಾಗುವುದು ಎಂದರು.
ವಿವಿಧ ಸಮಾಜದ ಮುಖಂಡರಾದ ನಂದಕುಮಾರ ಪಾಟೀಲ, ಲೋಚನೇಶ ಹೂಗಾರ, ಶಾಂತಣ್ಣ ಕಡಿವಾಲ, ಬಸವರಾಜ ತೇರದಾಳ, ಗೋಪಾಲ ಕುಲಕರ್ಣಿ, ಸುರೇಶ ಮುದರಡ್ಡಿ, ಮೋಹನ ಅಸುಂಡಿ, ವಿವಿಧ ಧರ್ಮಗಳ ಮುಖಂಡರು ಸೇರಿ ಇತರರು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಬಮ್ಮನಹಳ್ಳಿ ಹಾಗೂ ಮುಳ್ಳಳ್ಳಿಯ ಶ್ರೀ ಶಿವಯೋಗಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಯೋಜಕ ಮಲ್ಲಿಕಾರ್ಜುನ ಸಾವಕಾರ ಇತರರು ಇದ್ದರು.