

ಜಯವಾಣಿ ಸುದ್ದಿಜಾಲ ಕಾರವಾರ
ಒಳಚರಂಡಿ ನೀರನ್ನು ಶುದ್ಧೀಕರಿಸಿ ಬಳಸಿ ಗಿಡಗಳನ್ನು ಬೆಳೆಸಿದ ಇಲ್ಲಿನ ನಗರಸಭೆಗೆ ರಾಜ್ಯಮಟ್ಟದ ಪ್ರಥಮ ಬಹುಮಾನ ಒಲಿದು ಬಂದಿದೆ.
ಪೌರಾಡಳಿತ ನಿರ್ದೇಶನಾಲಯ ಹಾಗೂ ಸಿಟಿ ಮ್ಯಾನೇಜರ್ಸ್ ಅಸೋಸಿಯೇಶನ್(ಸಿಮ್ಯಾಕ್) ರಾಜ್ಯದ ನಗರಾಭಿವೃದ್ಧಿ ಸಂಸ್ಥೆಗಳ ಕಾರ್ಯವನ್ನು ನೀಡುವ ಪ್ರಶಸ್ತಿ ಇದಾಗಿದ್ದು, 50 ಸಾವಿರ ರೂ. ಚೆಕ್ ಹಾಗೂ ಪ್ರಮಾಣಪತ್ರ, ಆಕರ್ಷಕ ಶೀಲ್ಡ್ ಹೊಂದಿದೆ.
ಬೆಂಗಳೂರಿನಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ ಅವರು ಪ್ರಶಸ್ತಿ ವಿತರಿಸಿದರು. ಪೌರಾಡಳಿತ ಇಲಾಖೆ ನಿರ್ದೇಶಕಿ ಮಂಜುಶ್ರೀ, ಜಂಟಿ ನಿರ್ದೇಶಕ ಶಿವಸ್ವಾಮಿ ಇದ್ದರು. ಕಾರವಾರ ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಉಪಾಧ್ಯಕ್ಷ ಪ್ರಕಾಶ ನಾಯ್ಕ, ಪೌರಾಯುಕ್ತ ಆರ್.ಪಿ.ನಾಯ್ಕ, ಹಿರಿಯ ಆರೋಗ್ಯಇನ್ಸ್ಪೆಕ್ಟರ್ ಯಾಖೂಬ್ ಶೇಖ್ ಪ್ರಶಸ್ತಿ ಸ್ವೀಕರಿಸಿದರು. ಸಾರ್ವಜನಿಕರ ಸಹಕಾರದಲ್ಲಿ ನಗರದೆಲ್ಲೆಡೆ ಸಾವಿರಕ್ಕೂ ಅಧಿಕ ಗಿಡಗಳನ್ನು ನೆಟ್ಟಿರುವುದು ಮಾತ್ರವಲ್ಲ ಒಳಚರಂಡಿ ನೀರನ್ನು ಶುದ್ಧೀಕರಿಸಿ ಬೇಸಿಗೆಯಲ್ಲಿ ಅವುಗಳಿಗೆ ನೀರುಣಿಸುವ ಕಾರ್ಯವನ್ನು ಮಾಡಲಾಗುತ್ತಿದೆ. 2021-22 ನೇ ಸಾಲಿನ ಕಾರ್ಯಕ್ಕಾಗಿ ಈ ಪ್ರಶಸ್ತಿ ಲಭ್ಯವಾಗಿದೆ.