ಮತ್ಸ್ಯ ಸಂತಾನ ಕ್ಷೀಣ

Fish story
Published on

ಮಾರ್ಕಂಡೇಯ ಮೀನು ಮರಿ ಉತ್ಪಾದನಾ ಕೇಂದ್ರದಲ್ಲಿಲ್ಲ ಸಿಬ್ಬಂದಿ

ಬೂದಿಕೋಟೆ: ಮಾರ್ಕಂಡೇಯ ಮೀನುಮರಿ ಉತ್ಪಾದನಾ ಕೇಂದ್ರದಲ್ಲಿ ಸಿಬ್ಬಂದಿ ಹಾಗೂ ಇತರೆ ಮೂಲ ಸೌಕರ್ಯಗಳ ಕೊರತೆಯಿಂದಾಗಿ ಮೀನು ಮರಿ ಉತ್ಪಾದನೆಗೆ ಸಮಸ್ಯೆ ಎದುರಾಗಿದೆ.

ಸರ್ಕಾರ ಮೀನುಗಾರಿಕೆಗೆ ಉತ್ತೇಜನ ನೀಡುವ ಸಲುವಾಗಿ ಅನೇಕ ಕಾರ್ಯಕ್ರಮಗಳನ್ನು ನೀಡುತ್ತಿದೆ. ಇದರೊಟ್ಟಿಗೆ ಜಿಲ್ಲೆಯಲ್ಲಿ ಕೆರೆ&ಕುಂಟೆಗಳು ಹೆಚ್ಚಿನ ಪ್ರಮಾಣದಲ್ಲಿ ಇರುವ ಕಾರಣ ಇವುಗಳನ್ನೇ ಮೀನು ಸಾಕಾಣಿಕೆಗೆ ಬಳಕೆ ಮಾಡಲಾಗುತ್ತಿದೆ. ಮಳೆಗಾಲದಲ್ಲಿ ಮಳೆ ನೀರು ಶೇಖರಣೆಯಾಗುತ್ತಿದ್ದಂತೆ ಗ್ರಾಮ ಪಂಚಾಯಿತಿ, ಸಣ್ಣ ನಿರಾವರಿ ಇಲಾಖೆ ಮತ್ತು ಇತರೆ ಇಲಾಖೆಗಳ ವ್ಯಾಪ್ತಿಗೆ ಬರುವ ಕೆರೆಗಳನ್ನು ಹರಾಜು ಮೂಲಕ ಮೀನು ಸಾಕಾಣಿಕೆದಾರರು ಪಡೆದು ಮೀನು ಸಾಕಣೆ ಮಾಡುತ್ತಿದ್ದಾರೆ.

ಮೀನುಗಾರಿಕೆಯನ್ನೇ ನಂಬಿಕೊಂಡಿರುವ ಬಹುತೇಕ ಕುಟುಂಬಗಳು ಅದರಿಂದಲೇ ಬದುಕು ಕಟ್ಟಿಕೊಂಡಿದ್ದಾರೆ. ಮೀನುಗಾರಿಕೆಗೆ ಬೇಕಾದ ಮೀನುಮರಿ ಉತ್ಪಾದನೆ ಮಾಡುವ ಸಲುವಾಗಿ ಸರ್ಕಾರ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಬಳಿ ಮಾರ್ಕಂಡೇಯ ಡ್ಯಾಂ ಬಳಿ ಮೀನುಗಾರಿಕೆ ಇಲಾಖೆಯಿಂದ ಮಾರ್ಕಂಡೇಯ ಮೀನು ಮರಿ ಉತ್ಪಾದನಾ ಕೇಂದ್ರವನ್ನು ತೆರೆದಿದೆ.

ಸದ್ಯ ಸಹಾಯಕ ನಿರ್ದೇಶಕರು ಸೇರಿ ಮೂವರು ಹೊರ ಗುತ್ತಿಗೆ ಆಧಾರದಲ್ಲಿ, ಒಬ್ಬರು ದಿನಗೂಲಿ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಸರ್ಕಾರದ ಆದೇಶದಂತೆ ಒಬ್ಬರು ವಾಹನ ಚಾಲಕರು, ಒಬ್ಬರು ಕಚೇರಿ ಸಹಾಯಕರು, ಇಬ್ಬರು ಮೀನುಗಾರಿಕೆ ಸಹಾಯಕರ ನೇಮಕ ಆಗಬೇಕಿದ್ದು, ಎಲ್ಲಹುದ್ದೆಗಳು ಖಾಲಿ ಇವೆ. ಈ ಹಿಂದೆ ಎಲ್ಲ ಕಾಯಂ ನೌಕರರ ಜತೆಗೆ 7 ಮಂದಿ ಮೀನುಗಾರಿಕೆ ಸಹಾಯಕರು ದಿನಗೂಲಿ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದರು. ಇದರಿಂದ ಇಲಾಖೆ ನೀಡುವ ಉತ್ಪಾದನಾ ಗುರಿಯನ್ನು ತಲುಪುತ್ತಿತ್ತು. ಆದರೆ, ಈಗ ವಿವಿಧ ಹುದ್ದೆಗಳು ಖಾಲಿ ಇರುವ ಕಾರಣ ಮರಿ ಉತ್ಪಾದನೆಗೆ ಹಿನ್ನಡೆಯಾಗಿದೆ.

ಬೇಡಿಕೆಗೆಗನುಗುಣವಾಗಿ ತಳಿ ಉತ್ಪಾದನೆ: ಇದರ ಮೂಲಕ ಮೀನುಗಾರಿಕೆಗೆ ಬೇಕಾದ ವಿವಿಧ ತಳಿಯ ಮೀನು ಮರಿಗಳನ್ನು ಉತ್ಪಾದಿಸಿ ಕೋಲಾರ ಜಿಲ್ಲೆ ಮಾತ್ರವಲ್ಲದೆ, ನೆರೆಯ ರಾಜ್ಯಗಳಿಗೂ ಸಹ ಮರಿಗಳನ್ನು ಪೂರೈಕೆ ಮಾಡುತ್ತಿದೆ. ಕೇಂದ್ರದಲ್ಲಿ ಬೇಡಿಕೆಗೆ ಅನುಗುಣವಾಗಿ ಕಾಟ್ಲ, ರೋಹು ಮತ್ತು ಸಾಮಾನ್ಯಗೆಂಡೆ ತಳಿಯ ಮೀನಿನ ಮರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಮಾಡಲಾಗುತ್ತಿದೆ.

ಉತ್ಪಾದನೆ ಕುಂಠಿತಕ್ಕೆ ಸಿಬ್ಬಂದಿ ಕೊರತೆ: ಕಳೆದ ಎರಡು ವರ್ಷಗಳ ಹಿಂದೆ 6 ಜಿಲ್ಲೆಗಳು ಒಳಪಡುವಂತಹ ಬೆಂಗಳೂರು ವಿಭಾಗದಲ್ಲಿ ಬೂದಿಕೋಟೆಯ ಮೀನು ಮರಿ ಉತ್ಪಾದನಾ ಕೇಂದ್ರದಲ್ಲಿ ಅತಿ ಹೆಚ್ಚು ಮೀನು ಮರಿ ಉತ್ಪಾದನೆ ಮಾಡಿದ ಹೆಗ್ಗಳಿಕೆ ಪಡೆದಿತ್ತು. 2024&-25ನೇ ಸಾಲಿನಲ್ಲಿ 2.50 ಕೋಟಿ ಮರಿ ಉತ್ಪಾದನೆಯ ಗುರಿಯನ್ನು ಇಲಾಖೆ ನೀಡಿದ್ದು, ಈ ಪೈಕಿ 2.38 ಕೋಟಿ ಮರಿಗಳನ್ನು ಉತ್ಪಾದನೆ ಮಾಡುವ ಮೂಲಕ ವಿಭಾಗದಲ್ಲಿ ಎರಡನೆಯ ಸ್ಥಾನ ಪಡೆದಿದೆ. ಉತ್ಪಾದನಾ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ ಹಾಗೂ ವಿವಿಧ ಸೌಕರ್ಯಗಳ ಕೊರತೆಯಿಂದ ವರ್ಷದಿಂದ ವರ್ಷಕ್ಕೆ ಮರಿ ಉತ್ಪಾದನೆಯ ಪ್ರಮಾಣ ಕುಂಠಿತವಾಗುತ್ತಿದೆ.

ಡ್ಯಾಂನಿಂದ ನೀರು ಸ್ಥಗಿತ: ಮುಂದೆ ಮಳೆಗಾಲ ಆರಂಭವಾಗುವುದಕ್ಕೂ ಮೊದಲೇ ಈ ಬೇಸಿಗೆಯಲ್ಲಿಯೇ ಮರಿಗಳ ಉತ್ಪಾದನೆ ಮಾಡಿಕೊಂಡು ಬೇಡಿಕೆಗೆ ತಕ್ಕಂತೆ ದಾಸ್ತಾನು ಮಾಡಿಕೊಂಡರೆ ಮಾತ್ರ ಮರಿ ಪೂರೈಕೆಗೆ ಸಾಧ್ಯವಾಗುತ್ತದೆ. ಆದರೆ, ಸಿಬ್ಬಂದಿ ಜತೆಗೆ ನೀರು ಶೇಖರಣೆಯ ಕೇಂದ್ರ, ಬೋರ್​ವೆಲ್​ ಸೇರಿ ವಿವಿಧ ಮೂಲ ಸೌಕರ್ಯಗಳ ಕೊರತೆಯಿಂದ ಮೀನು ಮರಿಗಳ ಉತ್ಪಾದನೆ ಕುಂಠಿತವಾಗಬಹುದಾಗಿದೆ. ಇದರೊಟ್ಟಿಗೆ ಈ ಹಿಂದೆ ಮರಿಗಳ ಸಾಕಾಣಿಕೆಗೆ ಬೇಕಾದಷ್ಟು ಮಾರ್ಕಂಡೇಯ ಡ್ಯಾಂನಿಂದ ನೀರನ್ನು ಪೂರೈಕೆ ಮಾಡಲಾಗುತ್ತಿತ್ತು. ಈಗ ಅದನ್ನು ಸ್ಥಗಿತಗೊಳಿಸಿರುವುದು ಹಿನ್ನಡೆಗೆ ಮತ್ತೊಂದು ಕಾರಣವಾಗಿದೆ.

ಸಿಬ್ಬಂದಿ ಕೊರತೆಯ ನಡುವೆಯೂ ಮೀನುಮರಿ ಉತ್ಪಾದನೆ ಮಾಡಿ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲಾಗುತ್ತದೆ. ಡ್ಯಾಂ ನೀರನ್ನು ಪೂರೈಕೆ ಮಾಡದ ಕಾರಣ ಮರಿ ಸಾಕಣೆಗೆ ತೊಡಕಾಗಿದ್ದು, ಮಾರ್ಕಂಡೇಯ ಡ್ಯಾಂ ನೀರನ್ನು ಪೂರೈಸಬೇಕು. ಬೋರ್​ವೆಲ್​ ನೀರನ್ನು ನೇರವಾಗಿ ಮರಿಗಳ ತೊಟ್ಟಿಗೆ ಹರಿಸದೇ ತೊಟ್ಟಿಯಲ್ಲಿ ಶೇಖರಣೆ ಮಾಡಿಕೊಂಡು ನಂತರ ತೊಟ್ಟಿಗಳಿಗೆ ಹರಿಸಬೇಕು. ಹಾಗಾಗಿ ಒಂದು ನೀರು ಸಂಗ್ರಹಣಾ ತೊಟ್ಟಿಯ ಜತೆಗೆ ಜರೂರಾಗಿ ಹೊಸದೊಂದು ಬೋರ್​ವೆಲ್​ ಅವಶ್ಯ. -  ಬಿ.ಎನ್​.ಲಕ್ಷ್ಮೀಕಾಂತ್​ ಸಹಾಯಕ ನಿರ್ದೇಶಕ, ಮೀನುಗಾರಿಕೆ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net