ಉಡುಪಿಯಲ್ಲಿ ಮೀನುಗಾರಿಕೆ ಆರಂಭ

FISHING NEW
Published on

ಉಡುಪಿ/ಗಂಗೊಳ್ಳಿ: ಲಾಕ್‌ಡೌನ್‌ನಿಂದಾಗಿ ಒಂದೂವರೆ ತಿಂಗಳಿಂದ ಸ್ಥಗಿತಗೊಂಡಿದ್ದ ಯಾಂತ್ರೀಕೃತ ಮೀನುಗಾರಿಕೆ ಉಡುಪಿ ಜಿಲ್ಲೆಯಲ್ಲಿ ಆರಂಭಗೊಂಡಿದೆ.

ಯಾಂತ್ರೀಕೃತ ದೋಣಿಗಳಲ್ಲಿ ಷರತ್ತುಬದ್ಧ ಮೀನುಗಾರಿಕೆ ನಡೆಸಲು ಅನುಮತಿ ದೊರೆತ ಹಿನ್ನೆಲೆಯಲ್ಲಿ ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಬೋಟುಗಳಿಗೆ ಮಂಜುಗಡ್ಡೆ ತುಂಬಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಶನಿವಾರ ರಾತ್ರಿ ಮತ್ತು ಭಾನುವಾರ ಬೋಟುಗಳು ಮೀನುಗಾರಿಕೆಗೆ ತೆರಳುತ್ತಿವೆ ಎಂಬುದನ್ನು ಮೀನುಗಾರರು ಖಚಿತಪಡಿಸಿದ್ದಾರೆ. ಹಂಗಾರಕಟ್ಟೆ ಮತ್ತು ಗಂಗೊಳ್ಳಿಯಲ್ಲಿ ತಲಾ 8 ಬೋಟ್‌ಗಳಿಗೆ ಅನುಮತಿ ನೀಡಲಾಗಿದೆ.

ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳು, ಕರಾವಳಿ ಕಾವಲು ಪಡೆ ಅಧಿಕಾರಿಗಳು ಮೀನುಗಾರ ಮುಖಂಡರುಗಳು ಜತೆ ಸೇರಿ ಸಭೆ ನಡೆಸಿ ಷರತ್ತುಬದ್ದ ಮೀನುಗಾರಿಕೆ ನಡೆಸಲು ಅನುಮತಿ ಪಡೆದಿದ್ದಾರೆ. ಬಂದರಿನಲ್ಲಿ ಏಕಕಾಲದಲ್ಲಿ 30 ಬೋಟುಗಳಿಗೆ ಮಾತ್ರ ಮೀನು ಖಾಲಿ ಮಾಡಲು ಅವಕಾಶ ನೀಡಲಾಗಿದೆ. ಎಲ್ಲ ನಿಯಮಗಳು ಮೀನುಗಾರಿಕೆ ವೇಳೆ ಪಾಲನೆಯಾಗಲಿದೆ. ಇಲಾಖೆಯಿಂದ ಪಾಸ್ ಪಡೆಯಬೇಕು ಮತ್ತು ಮೀನುಗಾರ ಕಾರ್ಮಿಕರ ವಿವರಗಳನ್ನು ನೀಡಬೇಕು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಗಂಗೊಳ್ಳಿಯಲ್ಲಿ ಗೊಂದಲ: ಗಂಗೊಳ್ಳಿಯಲ್ಲಿ ಶುಕ್ರವಾರವೇ ಮೀನುಗಾರಿಕೆ ಆರಂಭಗೊಂಡಿದ್ದರೂ, ಸೀಮಿತ ಬೋಟ್‌ಗಳಿಗೆ ಅನುಮತಿ ಗೊಂದಲದಿಂದ ಮೀನುಗಾರಿಕೆ ಸ್ಥಗಿತಗೊಳಿಸಲು ಮೀನುಗಾರರು ನಿರ್ಧರಿಸಿದ್ದಾರೆ. ಗಂಗೊಳ್ಳಿ ಬಂದರಿನಲ್ಲಿ 100ಕ್ಕೂ ಮಿಕ್ಕಿ ಬೋಟುಗಳಿದ್ದು, ಪ್ರತಿದಿನ 8 ಬೋಟುಗಳಿಗೆ ಮಾತ್ರ ಮೀನು ಇಳಿಸಲು ಅನುಮತಿ ನೀಡಲಾಗಿದೆ. ಮೀನುಗಾರಿಕೆ ಮುಗಿಸಿ ಬಂದ ಬಳಿಕ ಬಂದರಿನಲ್ಲಿ ಹರಾಜು ಅಥವಾ ಮಾರಾಟಕ್ಕೆ ಅವಕಾಶ ನೀಡಿಲ್ಲ. ಮೀನುಗಳನ್ನು ನೇರವಾಗಿ ವಾಹನಗಳಿಗೆ ತುಂಬಿಸಿ, ಸಾಗಿಸಬೇಕು ಎಂದು ಜಿಲ್ಲಾಡಳಿತ ನೀಡಿರುವ ಆದೇಶ ಪಾಲನೆಗೆ ತೊಡಕಾಗಿರುವುದು ಮತ್ತು ವ್ಯಕ್ತಿಗತ ಅಂತರ ಕಾಯ್ದುಕೊಳ್ಳಲು ಅಸಾಧ್ಯವಾಗಿರುವುದರಿಂದ ಮೀನುಗಾರಿಕೆ ನಡೆಸದಿರಲು ತೀರ್ಮಾನಿಸಲಾಗಿದೆ. ಇಲಾಖೆಯ ಸಹಾಯಕ ನಿರ್ದೇಶಕಿ ಅಂಜನಾದೇವಿ ಮೀನುಗಾರರ ಸಮಸ್ಯೆ ಆಲಿಸಿದ್ದಾರೆ.ಇದನ್ನು ಜಿಲ್ಲಾಧಿಕಾರಿ ಗಮನಕ್ಕೆ ತರುತ್ತೇನೆ. ಕರೊನಾ ವೈರಸ್ ಹರಡದಂತೆ ಜಿಲ್ಲಾಡಳಿತ ಕೈಗೊಂಡಿರುವ ಮುನ್ನೆಚ್ಚರಿಕೆ, ನಿರ್ದೇಶನ ಎಲ್ಲರೂ ಪಾಲಿಸಬೇಕು ಎಂದರು. ಈ ವೇಳೆ ಮಾತಿನ ಚಕಮಕಿಯೂ ನಡೆಯಿತು. ಬೇರೆ ಬೇರೆ ಊರಿನ ಜನ ಮೀನು ಖರೀದಿಗೆ ಬರುತ್ತಿದ್ದು, ಬಂದರಿನಲ್ಲಿ ಹೆಚ್ಚಿನ ಜನ ಸೇರುತ್ತಿದ್ದಾರೆ ಎಂದು ಬಂದರಿನ ಅವ್ಯವಸ್ಥೆ ಬಗ್ಗೆ ಮೀನುಗಾರರು ಅಸಮಾಧಾನ ವ್ಯಕ್ತಪಡಿಸಿದರು.

ಇನ್ನು 20 ದಿನ ಮಾತ್ರ: ಮೇ ಅಂತ್ಯದವರೆಗೆ ಮಾತ್ರ ಮೀನುಗಾರಿಕೆಗೆ ಅವಕಾಶವಿದೆ. ಜೂನ್ 1ರಿಂದ ಜುಲೈ ಅಂತ್ಯದವರೆಗೆ ಮೀನುಗಾರಿಕೆಗೆ ಮಳೆಗಾಲದ ಅವಧಿಯ ನಿಷೇಧ ಇರುತ್ತದೆ. ಈ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಜಿಲ್ಲಾಡಳಿತ ಅನುಮತಿ ನೀಡಿದರೂ ಮೀನುಗಾರಿಕೆ ನಡೆಸುವುದಿಲ್ಲ ಎಂದು ಟ್ರಾಲ್ ಬೋಲ್ ಮಾಲೀಕ ಮೋಹನ್ ಬೆಂಗ್ರೆ ತಿಳಿಸಿದ್ದಾರೆ.

ಕರೊನಾ ತಡೆಗಾಗಿ ಸರ್ಕಾರ ರೂಪಿಸಿದ ನಿಯಮಾವಳಿಗಳನ್ನು ಸಮರ್ಪಕವಾಗಿ ಪಾಲನೆ ಮಾಡುವ ಬಗ್ಗೆ ಸಂಘ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಲಿದೆ. ಜಿಲ್ಲೆಯವರು ಮಾತ್ರ ಮೀನು ಖರೀದಿಸಲು ಅವಕಾಶ, ಅನ್ಯರಾಜ್ಯದ ವಾಹನಗಳಿಗೆ ಬಂದರು ಪ್ರವೇಶ ನಿಷಿದ್ಧ. - ಕೃಷ್ಣ ಎಸ್. ಸುವರ್ಣ, ಅಧ್ಯಕ್ಷ, ಮಲ್ಪೆ ಮೀನುಗಾರರ ಸಂಘ ಮೀನು ಹಿಡಿದು ತಂದ ನಂತರ ದಡದಲ್ಲಿ ಬೋಟ್‌ನಿಂದ ಮೀನು ಖಾಲಿ ಮಾಡುವ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಬಂದರಿನೊಳಗೆ ಸಾರ್ವಜನಿಕ ಮೀನು ಹರಾಜು ಮತ್ತು ಚಿಲ್ಲರೆ ಮಾರಾಟ, ಹೋಲ್‌ಸೇಲ್ ಮಾರಾಟ ಮಾಡುವಂತಿಲ್ಲ. - ಗಣೇಶ್ ಕೆ, ಉಪ ನಿರ್ದೇಶಕ, ಮೀನುಗಾರಿಕೆ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net