

ಮಂಗಳೂರು: ಶೀತಲೀಕೃತ ಘಟಕಗಳಲ್ಲಿ ಜೋಪಾನವಾಗಿರಿಸಿದ ಮೀನುಗಳನ್ನು ತಿಂದು ಬಾಯಿ ಚಪ್ಪೆಯಾದ ಕರಾವಳಿಯ ಮೀನುಗಾರರಿಗೆ ಸಿಹಿ ಸುದ್ದಿ ಬಂದಿದೆ. ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳ ತಾಜಾ ಮೀನುಗಳು ಮಂಗಳೂರು ಹಾಗೂ ಆಸುಪಾಸಿನ ಮಾರುಕಟ್ಟೆಗಳನ್ನು ಪ್ರವೇಶಿಸಲು ಆರಂಭಿಸಿವೆ.
ಮಂಗಳೂರು ಅಳಿವೆ ಬಾಗಿಲು ಮತ್ತು ಅಕ್ಕಪಕ್ಕದ ಕಡಲ ದಂಡೆಗಳಿಂದ ಸಮುದ್ರಕ್ಕೆ ಇಳಿಯುವ ನಾಡದೋಣಿಗಳು ಕೂಡ ಸಣ್ಣ ಪ್ರಮಾಣದ ತಾಜಾ ಮೀನುಗಳನ್ನು ಮಾರುಕಟ್ಟೆಗೆ ಪೂರೈಸುತ್ತಿವೆ. ಕಳೆದೆರಡು ದಿನಗಳಿಂದ ತಮಿಳುನಾಡು ಮತ್ತು ಆಂಧ್ರಪ್ರದೇಶದ ಸಣ್ಣ ಬಂಗುಡೆ, ಬೂತಾಯಿ ಮುಂತಾದ ಮೀನುಗಳು ಸಣ್ಣ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದಿದ್ದು, ಕೆಲವೇ ದಿನಗಳಲ್ಲಿ ವಿವಿಧ ಜಾತಿಯ ಮೀನುಗಳು ದೊಡ್ಡ ಪ್ರಮಾಣದಲ್ಲಿ ಪೂರೈಕೆ ನಿರೀಕ್ಷಿಸಲಾಗಿದೆ.
ಕಾಡಿದ ತಾಜಾ ಮೀನಿನ ಕೊರತೆ: ಮೀನುಗಾರಿಕೆ ರಜೆ, ಜತೆಗೆ ಚಂಡಮಾರುತದ ಕಾರಣ ನಾಡದೋಣಿಗಳಿಗೂ ಸಮುದ್ರಕ್ಕೆ ಇಳಿಯಲು ನಿರ್ಬಂಧ ಪರಿಣಾಮ ಮಂಗಳೂರು ಮಾರುಕಟ್ಟೆಯಲ್ಲಿ ತಾಜಾ ಮೀನಿನ ಕೊರತೆ ತೀವ್ರವಾಗಿ ಕಾಡಲು ಆರಂಭಿಸಿತ್ತು. ಶೀತಲೀಕರಣ ಘಟಕದಲ್ಲಿ ಜೋಪಾನವಾಗಿರಿಸಿದ ಎಲ್ಲ ಜಾತಿಯ ಮೀನುಗಳು ಮಾರುಕಟ್ಟೆ ಪ್ರವೇಶಿಸಿದ್ದವು. ಆದರೆ ಶೀತಲೀಕರಣ ಘಟಕದಲ್ಲಿ ಇರಿಸಿದ ಮೀನುಗಳು ಮಂಗಳೂರು ಕರಾವಳಿಯ ಜನರು ಮನೆಯಲ್ಲಿ ಅಡುಗೆ ಮಾಡಲು ಹೆಚ್ಚು ಇಷ್ಟಪಡುವುದಿಲ್ಲ. ತಾಜಾ ಮೀನು ರುಚಿ ತಿಂದ ನಾಲಿಗೆಗೆ ಶೀತಲೀಕರಣ ಘಟಕದಲ್ಲಿರಿಸಿದ ಮೀನು ಚಪ್ಪೆ ಅನಿಸುತ್ತದೆ. ಆದರೆ ಇದೇ ಮೀನುಗಳಿಗೆ ಮಸಾಲೆ ಬೆರೆಸಿ, ರುಚಿಯ ಪೌಡರ್ ಹಾಕಿ ಗ್ರಾಹಕರಿಗೆ ಬಿಕರಿ ಮಾಡುವಲ್ಲಿ ಹೊಟೇಲ್ ಉದ್ಯಮಿಗಳು ಯಶಸ್ವಿಯಾಗುತ್ತಾರೆ.
ಮೀನುಗಾರಿಕೆ ಋತು ಆರಂಭ ವಿಳಂಬ?
ಕರ್ನಾಟಕ ಕರಾವಳಿಯಲ್ಲಿ ಜೂನ್ 1ರಿಂದ ಆಗಸ್ಟ್ 31ರ ತನಕ ಮಳೆಗಾಲದ ಅವಧಿ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧವಿದೆ. ಬಿಪರ್‌ಜಾಯ್ ಚಂಡಮಾರುತದ ಬೆನ್ನಲ್ಲೇ ಕರಾವಳಿಯಲ್ಲಿ ಮುಂಗಾರು ದುರ್ಬಲಗೊಂಡಿರುವ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷದ ಮೀನುಗಾರಿಕಾ ಋತು ಆರಂಭ ವಿಳಂಬವಾಗಬಹುದು. ಯಾಂತ್ರೀಕೃತ ಮೀನುಗಾರಿಕೆ ತಡವಾಗಬಹುದು ಎನ್ನುವ ಆತಂಕ ಮೀನುಗಾರರಲ್ಲಿ ಇದೆ. ಯಾಂತ್ರೀಕೃತ ಮೀನುಗಾರಿಕೆ ತಡವಾದರೆ ನಾಡದೋಣಿ ಮೀನುಗಾರರಿಗೆ ಸ್ವಲ್ಪ ಹೆಚ್ಚಿನ ಸಲು ದೊರೆಯುವ ಸಾಧ್ಯತೆ ಅಧಿಕ.