ಅನಿಶ್ಚಿತತೆಯಲ್ಲಿ ಮೀನುಗಾರಿಕೆ ಋತು

FISHING NEW
Published on

ಪ್ರಕಾಶ್ ಮಂಜೇಶ್ವರ ಮಂಗಳೂರು

ವಾರ್ಷಿಕ ಲೆಕ್ಕಾಚಾರ ಪ್ರಕಾರ ಜುಲೈ ಅಂತ್ಯಕ್ಕೆ ಮೀನುಗಾರಿಕೆ ರಜೆ ಮುಗಿಯುತ್ತಿದೆ. ಆದರೆ ಈ ಬಾರಿ ವರ್ಷಂಪ್ರತಿ ನಡೆಯುವಂತೆ ಆಗಸ್ಟ್ ಮೊದಲ ವಾರದಲ್ಲಿ ಹೊಸ ಮೀನುಗಾರಿಕೆ ಋತು ಆರಂಭಗೊಳ್ಳುವುದು ಅನಿಶ್ಚಿತತೆಯಲ್ಲಿದೆ.

ಮಂಗಳೂರು ದಕ್ಕೆಯಲ್ಲಿ ಪರ್ಸೀನ್, ಟ್ರಾಲ್ ಸೇರಿ ಒಟ್ಟು 1200 ಹಾಗೂ ಮಲ್ಪೆಯಲ್ಲಿ 1800 ಬೋಟುಗಳಿವೆ. ಈ ಬೋಟುಗಳಲ್ಲಿ ಶೇ.90 ಜನರು ಆಂಧ್ರಪ್ರದೇಶ, ತಮಿಳುನಾಡು, ಜಾರ್ಖಂಡ್, ಒಡಿಶಾ ರಾಜ್ಯಗಳ ಜನರು ದುಡಿಯುತ್ತಿದ್ದಾರೆ. ಶೇ.10 ಜನರಷ್ಟೇ ಸ್ಥಳೀಯರು ಇರುವುದು.

ಲಾಕ್‌ಡೌನ್ ಸಂದರ್ಭ ಊರಿಗೆ ತೆರಳಿರುವ ಕಾರ್ಮಿಕರು ಈ ತಿಂಗಳೊಳಗೆ ವಾಪಸ್ ಬಂದರೂ 14 ದಿನ ಹೋಂ ಕ್ವಾರಂಟೈನ್‌ನಲ್ಲಿರಬೇಕು. 4,000ದಷ್ಟು ಇರುವ ಹೊರರಾಜ್ಯದ ಕಾರ್ಮಿಕರನ್ನು ಕರೆತಂದು, ಅವರ ಕ್ವಾರಂಟೈನ್ ಅವಧಿಯ ವೆಚ್ಚ ಭರಿಸಿ ಮೀನುಗಾರಿಕೆ ನಡೆಸುವುದು ಸುಲಭದ ಮಾತಲ್ಲ.

ಅಂತರ ಪಾಲನೆ ಕಷ್ಟ

ಮೀನುಗಾರ ಮುಖಂಡರೇ ಒಪ್ಪಿಕೊಳ್ಳುವಂತೆ ಒಮ್ಮೆ ಮಂಗಳೂರು ದಕ್ಕೆ ಅಥವಾ ಮಲ್ಪೆಯಲ್ಲಿ ಮೀನುಗಾರಿಕೆ ವ್ಯವಹಾರ ಶುರುವಾದರೆ, ಅಲ್ಲಿ ಸಾಮಾಜಿಕ ಅಂತರ ಪಾಲಿಸುವುದು ಕಷ್ಟ. ಜಾತ್ರೆಯಂತೆ ಜನ ಸೇರುತ್ತಾರೆ. ಮೀನುಗಾರಿಕೆ ಶುರುವಾದ ಮೇಲೆ ಮೀನುಗಾರಿಕಾ ಬಂದರು ಪ್ರದೇಶ ಸೀಲ್‌ಡೌನ್ ಆದರೆ ಬೋಟು ಮಾಲೀಕರು, ಕಾರ್ಮಿಕರು ಭಾರಿ ನಷ್ಟ ಅನುಭವಿಸಬೇಕಾಗುತ್ತದೆ.

29ರಂದು ನಿರ್ಧಾರ: ಹೊಸ ಮೀನುಗಾರಿಕೆ ಋತು ಆರಂಭಿಸಲು ಇರುವ ಸವಾಲುಗಳ ಬಗ್ಗೆ ಜುಲೈ 29ರಂದು ಮಂಗಳೂರಿನಲ್ಲಿ ವಿವಿಧ ಮೀನುಗಾರಿಕೆ ಸಂಘಟನೆಗಳ ಸಭೆ ಏರ್ಪಡಿಸಲಾಗಿದೆ. ಟ್ರಾಲ್‌ಬೋಟ್, ಪರ್ಸೀನ್ ಬೋಟ್ ಮಾಲೀಕರು, ಹಸಿ ಮೀನು ವ್ಯಾಪಾರಸ್ಥರು, ಮೀನು ರಫ್ತು ನಡೆಸುವ ಸಂಸ್ಥೆ, ಫಿಶ್‌ಮಿಲ್ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಮೀನುಗಾರಿಕೆ ಋತು ಆರಂಭಿಸಲು ಇರುವ ಸವಾಲುಗಳನ್ನು ನಿಭಾಯಿಸುವ ಕುರಿತು ಚರ್ಚಿಸಲು ಜುಲೈ 29ರಂದು ಮೀನುಗಾರರ ಸಂಬಂಧಪಟ್ಟ ಸಂಘಸಂಸ್ಥೆ ಪ್ರತಿನಿಧಿಗಳ ಸಭೆ ಕರೆಯಲಾಗಿದೆ. ಸಭೆಯ ಬಳಿಕ ಮೀನುಗಾರಿಕೆ ಸಚಿವರು, ಜಿಲ್ಲಾಡಳಿತ ಜತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ನಿತಿನ್ ಕುಮಾರ್ ಅಧ್ಯಕ್ಷ, ಮಂಗಳೂರು ಟ್ರಾಲ್‌ಬೋಟ್ ಮೀನುಗಾರರ ಸಂಘ ಕೋವಿಡ್-19 ಪರಿಸ್ಥಿತಿಯಲ್ಲಿ ಯಾಂತ್ರೀಕೃತ ಮೀನುಗಾರಿಕೆ ನಡೆಸುವ ಬಗ್ಗೆ ಮೂರು ದಿನದೊಳಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮೀನುಗಾರಿಕೆ ಸಚಿವರು ತಿಳಿಸಿದ್ದಾರೆ. ಹೊರ ರಾಜ್ಯದಲ್ಲಿರುವ ಬೋಟ್ ಕಾರ್ಮಿಕರನ್ನು ಕರೆತರುವ ಹಾಗೂ ಅವರ ಕ್ವಾರಂಟೈನ್ ಅವಧಿಯ ವೆಚ್ಚವನ್ನು ಬೋಟ್ ಮಾಲೀಕರೇ ಭರಿಸಬೇಕು. ಜಿಲ್ಲಾಡಳಿತದ ನಿರ್ದೇಶನಗಳನ್ನು ಪಾಲಿಸಬೇಕು ಎಂದು ಇಲಾಖೆಯಿಂದ ಸೂಚನೆ ಬಂದಿದೆ. ಕೃಷ್ಣ ಸುವರ್ಣ ಅಧ್ಯಕ್ಷ, ಮಲ್ಪೆ ಮೀನುಗಾರರ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net